ನವದೆಹಲಿ: ಸ್ವತಂತ್ರ ತಮಿಳುನಾಡು ಪ್ರತಿಪಾದಿಸುವವರು ಪ್ರತ್ಯೇಕತಾವಾದದ ಧ್ವನಿ ಎತ್ತುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಅಂತಹವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಹಾಕಬೇಕು ಎಂದು ಆಗ್ರಹಿಸಿದರು. ಡಿಎಂಕೆ ನಾಯಕ ಎ ರಾಜಾ ಹೇಳಿಕೆ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಜಾ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಿ ಜೈಲಿಗೆ ಹಾಕಬೇಕು. 2ಜಿ ಪ್ರಕರಣದಲ್ಲಿ ಜೈಲು ಸೇರಿದ್ದ ವಂಚಕ ಆತ. ಸದ್ಯ ಜಾಮೀನಿನ ಮೇಲೆ ಇದ್ದಾರೆ. ಈ ಪರಿಸ್ಥಿತಿಯಲ್ಲಿ ಅವರ ಕೃತ್ಯವನ್ನು ಜಾಮೀನು ಷರತ್ತುಗಳ ಉಲ್ಲಂಘನೆ ಎಂದು ಪರಿಗಣಿಸಬಹುದು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಬಹುಪಾಲು ತಮಿಳು ಜನರು ಪ್ರತ್ಯೇಕತಾವಾದದ ವಿರುದ್ಧ ಇದ್ದಾರೆ. ಅವರು ರಾಷ್ಟ್ರೀಯ ಮುಖ್ಯವಾಹಿನಿಗೆ ಹತ್ತಿರವಾಗಿದ್ದಾರೆ. ಡಿಎಂಕೆಯ ಇಂತಹ ಹೇಳಿಕೆಗಳು ಅಂತಹವರಿಗೆ ಅವಮಾನ ಮಾಡುತ್ತಿವೆ ಎಂದು ಸುಬ್ರಮಣಿಯನ್ ಸ್ವಾಮಿ ತಿಳಿಸಿದರು.
ತಮಿಳುನಾಡಿಗೆ ವಿಶೇಷ ಸ್ಥಾನಮಾನ ನೀಡಬೇಕು ಮತ್ತು ಪೆರಿಯಾರ್ ಅವರ ಆಲೋಚನೆಯನ್ನು ಅನುಸರಿಸಿ ತಮಿಳುನಾಡಿನ ಬೇಡಿಕೆಯತ್ತ ಮುಂದುವರಿಯಬೇಕು ಎಂದು ಡಿಎಂಕೆ ನಾಯಕ ಮತ್ತು ಸಂಸದ ಎ ರಾಜಾ ಹೇಳಿದ್ದರು ತಮಿಳುನಾಡಿಗೆ ರಾಜ್ಯ ಸ್ವಾಯತ್ತತೆ ನೀಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಿದ್ಧರಾಗಬೇಕು ಎಂದು ರಾಜಾ ಆಗ್ರಹಿಸಿದ್ದರು. ರಾಜಾ ಅವರ ಮಾತುಗಳು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಸಮ್ಮುಖದಲ್ಲಿ ನಡೆದಿತ್ತು.