ಮುಂಬೈ: ಗುಜರಾತಿಗಳು ಮತ್ತು ರಾಜಸ್ಥಾನಿಗಳು ತೆರಳಿದರೆ ಮುಂಬೈ ದೇಶದ ಆರ್ಥಿಕ ರಾಜಧಾನಿಯಾಗಿ ಉಳಿಯುವುದಿಲ್ಲ ಎಂಬ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರ ಹೇಳಿಕೆ ಶನಿವಾರ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಈ ಹೇಳಿಕೆಯನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಹೇಳಿದ್ದಾರೆ.
ಪ್ರತಿಪಕ್ಷದ ನಾಯಕರು ರಾಜ್ಯಪಾಲ ಕೊಶ್ಯಾರಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿವೆ. ಆದರೆ ರಾಜ್ಯಪಾಲರು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ.
ಶುಕ್ರವಾರ ಸಂಜೆ ಉಪನಗರ ಅಂಧೇರಿಯಲ್ಲಿ ನಡೆದ ಸಮಾರಂಭದಲ್ಲಿ ಕೊಶ್ಯಾರಿ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮಹಾರಾಷ್ಟ್ರದಿಂದ ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಹೊರಗೆ ಹಾಕಿದರೆ ರಾಜ್ಯದಲ್ಲಿ ಹಣವೇ ಇರುವುದಿಲ್ಲ ಮತ್ತು ಮುಂಬೈ ದೇಶದ ಆರ್ಥಿಕ ರಾಜಧಾನಿಯಾಗಿ ಉಳಿಯುವುದಿಲ್ಲ ಎಂದು ಕೊಶ್ಯಾರಿ ಹೇಳಿದ್ದರು.
ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು, ''ರಾಜ್ಯಪಾಲರು ಮರಾಠಿಗರ ವಿರುದ್ಧ ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ದ್ವೇಷವನ್ನು ಅಚಾತುರ್ಯದಿಂದ ಹೊರ ಹಾಕಿದ್ದಾರೆ ಎಂದರು.
"ಕೊಶ್ಯಾರಿ ಅವರನ್ನು ಮನೆಗೆ ಕಳುಹಿಸಬೇಕೋ ಅಥವಾ ಜೈಲಿಗೆ ಕಳುಹಿಸಬೇಕೋ ಎಂದು ನಿರ್ಧರಿಸುವ ಸಮಯ ಈಗ ಬಂದಿದೆ. ಕಳೆದ ಮೂರು ವರ್ಷಗಳಲ್ಲಿ ಅವರು ಮಹಾರಾಷ್ಟ್ರದಲ್ಲಿ ಉಳಿದುಕೊಂಡಿದ್ದರೂ ಮರಾಠಿ ಭಾಷಿಕರನ್ನು ಅವಮಾನಿಸಿದ್ದಾರೆ. ಈಗ ಈ ಹೇಳಿಕೆಯಿಂದ ಅವರು ರಾಜ್ಯಪಾಲರ ಹುದ್ದೆಗೆ ಅಗೌರವ ತಂದಿದ್ದಾರೆ" ಎಂದು ಶಿವಸೇನಾ ಅಧ್ಯಕ್ಷ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಂಡಾಯ ಶಿವಸೇನೆ ಬಣದ ನಾಯಕ ಮುಖ್ಯಮಂತ್ರಿ ಶಿಂಧೆ ಅವರು, ಕೊಶ್ಯಾರಿಯವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಮಾಲೆಗಾಂವ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಂಧೆ, "ಕೊಶ್ಯಾರಿ ಅವರ ಹೇಳಿಕೆಗಳನ್ನು ನಾವು ಒಪ್ಪುವುದಿಲ್ಲ. ಇದು ಅವರ ವೈಯಕ್ತಿಕ ಅಭಿಪ್ರಾಯ. ಅವರು ಈಗ ಸ್ಪಷ್ಟೀಕರಣ ನೀಡಿದ್ದಾರೆ. ಅವರು ಸಾಂವಿಧಾನಿಕ ಹುದ್ದೆಯನ್ನು ಹೊಂದಿದ್ದಾರೆ ಮತ್ತು ಅವರ ಕಾರ್ಯಗಳು ಇತರರಿಗೆ ಅವಮಾನವಾಗದಂತೆ ನೋಡಿಕೊಳ್ಳಬೇಕು. ಮರಾಠಿ ಸಮುದಾಯದ ಕಠಿಣ ಪರಿಶ್ರಮವು ಮುಂಬೈನ ಅಭಿವೃದ್ಧಿ ಮತ್ತು ಪ್ರಗತಿಗೆ ಕಾರಣ. ಮುಂಬೈ ಮತ್ತು ಮರಾಠಿ ಜನರನ್ನು ಯಾರೂ ಅವಮಾನಿಸಲು ಸಾಧ್ಯವಿಲ್ಲ ಎಂದಿದ್ದಾರೆ.