ತಿರುವನಂತಪುರ: ಎಕೆಜಿ ಕೇಂದ್ರದಲ್ಲಿ ಸಿಡಿಮದ್ದು ಸ್ಪೋಟಿಸಿ ರಾಜ್ಯದಲ್ಲಿ ಗಲಭೆ ಎಬ್ಬಿಸಲು ಯತ್ನಿಸಿದ ಆರೋಪದ ಮೇಲೆ ಎಲ್.ಡಿ.ಎಫ್ ಸಂಚಾಲಕ ಇಪಿ ಜಯರಾಜನ್ ಮತ್ತು ಮಾಜಿ ಸಚಿವೆ ಪಿಕೆ ಶ್ರೀಮತಿ ವಿರುದ್ಧ ಪೋಲೀಸರಿಗೆ ದೂರು ನೀಡಲಾಗಿದೆ. ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕ ಕಾರ್ಯಕರ್ತ ಪೈಚಾರ ನವಾಜ್ ಕಂಟೋನ್ಮೆಂಟ್ ಪೋಲೀಸರನ್ನು ಸಂಪರ್ಕಿಸಿರುವರು.
ಎಕೆಜಿ ಕೇಂದ್ರದ ಮೇಲೆ ಬಾಂಬ್ ಎಸೆಯಲಾಗಿದೆ ಎಂದು ಇಪಿ ಜಯರಾಜನ್ ಹೇಳಿಕೆ ನೀಡಿದ ಬಳಿಕ ಸಿಪಿಎಂ-ಡಿವೈಎಫ್‍ಐ ಕಾರ್ಯಕರ್ತರು ರಾಜ್ಯದ ವಿವಿಧೆಡೆ ದಾಳಿ ನಡೆಸಿದ್ದರು. ಪಿ.ಕೆ.ಶ್ರೀಮತಿ ಅವರು ದೊಡ್ಡ ಶಬ್ದವನ್ನು ತಾನು ಕೇಳಿದ್ದು, ್ತ ಆಘಾತಕ್ಕೊಳಗಾದೆ ಎಂದು ಪಿ.ಕೆ.ಶ್ರೀಮತಿ ತಿಳಿಸಿದ್ದರು. ಆದರೆ ವಿಧಿವಿಜ್ಞಾನ ಪರೀಕ್ಷೆಯಲ್ಲಿ ಸ್ಫೋಟಿಸಿದ್ದು ಬಾಂಬ್ ಅಲ್ಲ ಸಾಮಾನ್ಯ ಪಟಾಕಿ ಎಂಬುದು ಸ್ಪಷ್ಟವಾಗಿದೆ.
ಇದೇ ವೇಳೆ ಪಟಾಕಿ ಎಸೆದವರನ್ನು ಬಂಧಿಸಲು ಪೋಲೀಸರಿಗೆ ಸಾಧ್ಯವಾಗಿಲ್ಲ. ಆರೋಪಿಗಳನ್ನು ಹಿಡಿಯಲು ಡಿಯೋ ಸ್ಕೂಟರ್ ಮಾಲೀಕರನ್ನು ಕೇಂದ್ರೀಕರಿಸಿ ಪೋಲೀಸರು ನಡೆಸುತ್ತಿರುವ ತನಿಖೆಯೂ ಹಾಸ್ಯಾಸ್ಪದವಾಗುತ್ತಿದೆ. ಕತ್ತಲಲ್ಲಿ ದಾಳಿ ನಡೆದಿರುವುದರಿಂದ ಆರೋಪಿಗಳನ್ನು ಹಿಡಿಯಲು ಸಮಯವಕಾಶ ವಿಸ್ತರಿಸಲು ಕಾರಣವಾಗುತ್ತಿದೆ ಎಂಬುದು ಸಿಪಿಎಂ ನಾಯಕರ ಹೊಸ ಸಮರ್ಥನೆ. ಸುಕುಮಾರ ಕುರುಪ್ ಇನ್ನೂ ಸಿಕ್ಕಿಲ್ಲ, ಒದೆಯಲು ಕಲಿತವನಿಗೆ ಒದೆಯುವುದು ಗೊತ್ತಿದೆ ಎಂದು ಜಯರಾಜನ್ ಹೊಸ ಪ್ರತಿಕ್ರಿಯೆ ನೀಡಿದ್ದಾರೆ.