ಕೊಚ್ಚಿ: ವಲಪಟ್ಟಣ ಇಸ್ಲಾಮಿಕ್ ಸ್ಟೇಟ್ ನೇಮಕಾತಿ ಪ್ರಕರಣದಲ್ಲಿ ಎನ್.ಐ.ಎ. ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಪ್ರಕರಣದ ಮೊದಲ ಮತ್ತು ಐದನೇ ಆರೋಪಿಗಳಾದ ಮಿಥಿಲಾಜ್ ಮತ್ತು ಹಮ್ಜಾ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ.ದಂಡ, ಎರಡನೇ ಆರೋಪಿ ಅಬ್ದುಲ್ ರಜಾಕ್ ಗೆ ಆರು ವರ್ಷ ಜೈಲು ಶಿಕ್ಷೆ ಹಾಗೂ 40 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಆರೋಪಿ ಮತ್ತೆ ಮೂರು ವರ್ಷ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್‍ಗೆ ಸೇರಲು ಕಣ್ಣೂರಿನಿಂದ ಯುವಕರನ್ನು ಸಿರಿಯಾಕ್ಕೆ ಕರೆತಂದ ಪ್ರಕರಣದಲ್ಲಿ ಇವರಿಗೆ ಶಿಕ್ಷೆಯಾಗಿದೆ. ಗುರುವಾರ ಪ್ರಕರಣದಲ್ಲಿ ಮೂವರು ಆರೋಪಿಗಳು ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿತು. ಕಣ್ಣೂರಿನ ವಿವಿಧ ಭಾಗಗಳಿಂದ 15ಕ್ಕೂ ಹೆಚ್ಚು ಮಂದಿ ಐ ಎಸ್ ಗೆ ಸೇರ್ಪಡೆಗೊಂಡಿದ್ದ ಪ್ರಕರಣ ಇದಾಗಿದೆ.
ಬಂಧಿತ ಆರೋಪಿಗಳು ಪಾಪ್ಯುಲರ್ ಫ್ರಂಟ್-ಎಸ್ ಡಿಪಿಐ ಕಾರ್ಯಕರ್ತರು. ಪ್ರಕರಣದಲ್ಲಿ 153 ಸಾಕ್ಷಿಗಳಿದ್ದಾರೆ. ಪೋನ್‍ಗಳು, ಸಾಮಾಜಿಕ ಮಾಧ್ಯಮ ಖಾತೆ ವಿವರಗಳು ಮತ್ತು ಇ-ಮೇಲ್‍ಗಳಂತಹ ಡಿಜಿಟಲ್ ಪುರಾವೆಗಳನ್ನು ಪ್ರಾಸಿಕ್ಯೂಷನ್ ಸಲ್ಲಿಸಿತ್ತು. ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 120 ಬಿ ಮತ್ತು 125 ಮತ್ತು ಯುಎಪಿಎ ಸೆಕ್ಷನ್ 38, 39 ಮತ್ತು 40 ರ ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿತ್ತು.