ಡಾರ್ಜಿಲಿಂಗ್: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಸುಂದರ ಪ್ರವಾಸಿ ತಾಣ. ಇಲ್ಲಿ ನಿನ್ನೆ ಭೇಟಿ ಕೊಟ್ಟ ಪ್ರವಾಸಿಗರು ದಿಗಿಲಾಗಿದ್ದಂತೂ ಗ್ಯಾರೆಂಟಿ. ಏಕೆಂದರೆ ಖುದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಹೋಲುವ ಮಹಿಳೆಯೊಬ್ಬರು ಸಣ್ಣ ಫಾಸ್ಟ್‌ಪುಡ್ ಅಂಗಡಿಯಲ್ಲಿ ತಮ್ಮ ಕೈಯಾರೆ ಪಾನೀಪುರಿ ತಯಾರಿಸಿ ನೀಡುತ್ತಿದ್ದರು.
ಇದನ್ನು ನೋಡಿ ಜನರು ಶಾಕ್ಗೊಂಡರು.ಎಷ್ಟೋ ಮಂದಿಗೆ ನಂಬಲು ಅಸಾಧ್ಯವೂ ಆಯಿತು. ಕೊನೆಗೆ ಹತ್ತಿರ ಹೋಗಿ ವಿಚಾರಿಸಿದಾಗ ಇನ್ನೂ ಶಾಕ್ಗೊಂಡರು. ಏಕೆಂದರೆ ಅಲ್ಲಿ ಪಾನೀಪುರಿ ಮಾರುತ್ತಿದ್ದುದು ನಿಜವಾಗಿಯೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೇ! ಈ ವಿಷಯ ಕಾಳ್ಗಿಚ್ಚಿನಂತೆ ಸುತ್ತಲಿನ ಪ್ರದೇಶಗಳಲ್ಲಿ ಹರಡಿ ಸಿಎಂ ಕೈಯಿಂದ ಪಾನೀಪುರಿ ತಿನ್ನಲು ತಂಡೋಪತಂಡವಾಗಿ ಆಗಮಿಸಿದರು. ಮಮತಾ ಪಾನೀಪುರಿ ಮಾತ್ರವಲ್ಲದೇ ಡಾರ್ಜಿಲಿಂಗ್ನ ಪ್ರಸಿದ್ಧ ತಿನಿಸು ಪುಚ್ಕಾ, ಗೋಲ್ಕಪ್ಪಾಗಳನ್ನೂ ಮಾಡಿ ನೀಡಿದರು.
ಅಷ್ಟಕ್ಕೂ ಮಮತಾ ಬ್ಯಾನರ್ಜಿಯವರು ಅಲ್ಲಿಗೆ ಹೋದದ್ದು, ಹೊಸದಾಗಿ ಆಯ್ಕೆಯಾದ ಗೂರ್ಖಾಲ್ಯಾಂಡ್ ಟೆರಿಟೋರಿಯಲ್ ಅಡ್ಮಿನಿಸ್ಟ್ರೇಷನ್ (ಜಿಟಿಎ) ಸದಸ್ಯರ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು. ಮೂರು ದಿನಗಳ ಕಾಲ ಡಾರ್ಜಲಿಂಗ್ನಲ್ಲಿದ್ದ ದೀದಿ, ನಂತರ ಮಹಿಳಾ ಸ್ವಸಹಾಯ ಗುಂಪಿನ ಫಾಸ್ಟ್‌ಫುಡ್ ಸ್ಟಾಲ್ ಉದ್ಘಾಟಿಸಿದ್ದಾರೆ. ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಖುದ್ದು ಪಾನಿಪೂರಿ ಮಾಡಿ ಪ್ರವಾಸಿಗರಿಗೆ, ಮಕ್ಕಳಿಗೆ ವಿತರಿಸಿದ್ದಾರೆ. ಈ ವೇಳೆ ಸಾರ್ವಜನಿಕರ ಜತೆ ಆತ್ಮೀಯವಾಗಿ ಸಂವಾದ ನಡೆಸಿದ್ದಾರೆ.
ಇದರ ವಿಡಿಯೋ ವೈರಲ್ ಆಗಿದ್ದು, ಥಹರೇವಾರಿ ಕಮೆಂಟ್ಗಳು ಬರುತ್ತಿವೆ. ಟಿಎಂಸಿ ಟ್ವೀಟ್ ಮಾಡಿರುವ ಈ ವಿಡಿಯೋದಲ್ಲಿ ಮಮತಾ ಬ್ಯಾನರ್ಜಿ ಅವರು ಪಾನಿಪುರಿ ತಯಾರಿಸಿ, ರಸ್ತೆ ಬದಿಯ ಸ್ಟಾಲ್‌ನಲ್ಲಿ ನೆರೆದಿದ್ದ ಮಕ್ಕಳು ಮತ್ತು ವೀಕ್ಷಕರಿಗೆ ನೀಡುತ್ತಿರುವುದನ್ನು ಕಾಣಬಹುದಾಗಿದೆ.
ಈ ಹಿಂದೆ ಇದೇ ಡಾರ್ಜಲಿಂಗ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ, ರಸ್ತೆ ಬದಿಯ ಸ್ಟಾಲ್‌ನಲ್ಲಿ ಪ್ರಸಿದ್ಧ ಟಿಬೇಟಿಯನ್ ಆಹಾರ ಮೊಮೋ ತಯಾರಿ ಪ್ರವಾಸಿಗರಿಗೆ ನೀಡಿದ್ದರು. ಇನ್ನು 2019ರಲ್ಲಿ ದಿಘಾದಿಂದ ಕೋಲ್ಕತಾಗೆ ಮರಳುವ ವೇಳೆ ಮಮತಾ ಬ್ಯಾನರ್ಜಿ ರಸ್ತೆ ಬದಿ ಟೀ ಸ್ಟಾಲ್‌ಗೆ ಭೇಟಿ ನೀಡಿದ ಮಮತಾ ಬ್ಯಾನರ್ಜಿ ಕೈಯಾರೆ ಟೀ ಮಾಡಿ ಜನರಿಗೆ ನೀಡಿದ್ದರು.
ವಿಡಿಯೋ ಇಲ್ಲಿದೆ ನೋಡಿ: