ಲಖನೌ: ಚುನಾವಣೆಗಾಗಿ ಘೋಷಿಸುವ 'ರೇವ್ರಿ ಕಲ್ಚರ್ (ಉಚಿತ ಕೊಡುಗೆಗಳ ಸಂಸ್ಕೃತಿ)' ದೇಶಕ್ಕೆ ಅತ್ಯಂತ ಅಪಾಯಕಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಆಮ್ ಆದ್ಮಿ ಪಕ್ಷವನ್ನು (ಎಎಪಿ) ನೇರ ಗುರಿಯಾಗಿಸಿಕೊಂಡು ಟೀಕಾಪ್ರಹಾರ ನಡೆಸಿದರು.
ಲಖನೌ: ಚುನಾವಣೆಗಾಗಿ ಘೋಷಿಸುವ 'ರೇವ್ರಿ ಕಲ್ಚರ್ (ಉಚಿತ ಕೊಡುಗೆಗಳ ಸಂಸ್ಕೃತಿ)' ದೇಶಕ್ಕೆ ಅತ್ಯಂತ ಅಪಾಯಕಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಆಮ್ ಆದ್ಮಿ ಪಕ್ಷವನ್ನು (ಎಎಪಿ) ನೇರ ಗುರಿಯಾಗಿಸಿಕೊಂಡು ಟೀಕಾಪ್ರಹಾರ ನಡೆಸಿದರು.
ದೆಹಲಿ ಮತ್ತು ಚಿತ್ರಕೂಟ ಸಂಪರ್ಕಿಸುವ 296 ಕಿ.ಮೀ. ಉದ್ದದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಅನ್ನು ಉದ್ಘಾಟಿಸಿದ ಪ್ರಧಾನಿ ಮೋದಿ ಅವರು, ನಂತರ ಉರೈನಲ್ಲಿ ನಡೆದ ಸಮಾರಂಭದಲ್ಲಿ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದರು.
ಗುಜರಾತ್ ಮತ್ತು ಹಿಮಾಚಲಪ್ರದೇಶದ ವಿಧಾನಸಭಾ ಚುನಾವಣೆಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧಿಸಿರುವುದಾಗಿ ಪ್ರಕಟಿಸಿರುವ ಎಎಪಿ, ಈ ಎರಡು ರಾಜ್ಯಗಳಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಜನರಿಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದೆ.
ಎಎಪಿಯ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮೋದಿ ಅವರು 'ಮತ ಗಳಿಸಲು ಉಚಿತ ಕೊಡುಗೆ ಭರವಸೆಗಳ ಸಂಸ್ಕೃತಿ ಈ ದಿನಗಳಲ್ಲಿ ಸಾಮಾನ್ಯ. ಜನರು, ಅದರಲ್ಲೂ ಯುವಜನರು ಇದಕ್ಕೆ ಬಲಿಯಾಗಬಾರದು. ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಇಂತಹ ರೇವ್ರಿ (ಉತ್ತರಪ್ರದೇಶ ಸೇರಿ ಉತ್ತರಭಾರತದಲ್ಲಿ ಹಬ್ಬಗಳಲ್ಲಿ ನೀಡುವ ಜನಪ್ರಿಯ ಸಿಹಿ ತಿನಿಸಿಗೆ ರೇವ್ರಿ ಎನ್ನುವ ಹೆಸರಿದೆ) ಉಚಿತ ಕೊಡುಗೆಗಳು ಎಂದಿಗೂ ತಡೆರಹಿತ ಹೆದ್ದಾರಿಗಳು, ರಕ್ಷಣಾ ಕಾರಿಡಾರ್‌ಗಳು ಅಥವಾ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾರವು. ಡಬಲ್ ಎಂಜಿನ್ ಸರ್ಕಾರ ಇಂತಹ ರೇವ್ರಿಗಳನ್ನು ಘೋಷಿಸದೇ ರಾಜ್ಯವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ' ಎಂದು ಅವರು ಹೇಳಿದರು.