ಚೆನ್ನೈ: ಏಕ ಭಾಷೆ, ಏಕ ಧರ್ಮ ಮತ್ತು ಏಕ ಸಂಸ್ಕೃತಿಯನ್ನು ಹೇರುವವರು ಭಾರತದ ಏಕತೆಯ ಶತ್ರುಗಳು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅಭಿಪ್ರಾಯಪಟ್ಟಿದ್ದಾರೆ.
ಮಾಧ್ಯಮ ಸಂಸ್ಥೆಯೊಂದರ ಸಮಾರಂಭದಲ್ಲಿ ಭಾಗಿಯಾಗಿದ್ದ ವೇಳೆ ತಾವು ಮಾಡಿದ ಭಾಷಣದ ಸಾರವನ್ನು ಸ್ಟಾಲಿನ್ ತಮ್ಮ ಟ್ವಿಟರ್ ಖಾತೆಯಲ್ಲಿ ಶನಿವಾರ ಪೋಸ್ಟ್ ಮಾಡಿದ್ದಾರೆ.
'ಏಕ ಭಾಷೆ, ಏಕ ಧರ್ಮ ಮತ್ತು ಏಕ ಸಂಸ್ಕೃತಿಯನ್ನು ಹೇರುವವರು ಭಾರತದ ಏಕತೆಯ ಶತ್ರುಗಳು. ಏಕರೂಪತೆಯು ಏಕತೆಯಲ್ಲ. ಏಕರೂಪತೆಯಿಂದ ನೀವು ಎಂದಿಗೂ ಏಕತೆಯನ್ನು ಸಾಧಿಸಲು ಸಾಧ್ಯವಿಲ್ಲ. ಬಲಿಷ್ಠ, ಸ್ವಾಯತ್ತ ರಾಜ್ಯಗಳನ್ನು ಹೊಂದುವುದೇ ಭಾರತ ಅಭಿವೃದ್ಧಿ ಹೊಂದಲು ಇರುವ ಏಕೈಕ ಮಾರ್ಗವಾಗಿದೆ' ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ತಮಿಳು ಸೇರಿದಂತೆ ಸಂವಿಧಾನದ 8ನೇ ಪರಿಚ್ಛೇದದಡಿ ಮಾನ್ಯತೆ ನೀಡಲಾಗಿರುವ ಎಲ್ಲ ಭಾಷೆಗಳಿಗೆ ಕೇಂದ್ರದ ಸರ್ಕಾರದ ಅಧಿಕೃತ ಭಾಷೆ ಸ್ಥಾನಮಾನ ಪಡೆಯುವ ನಿಟ್ಟಿನಲ್ಲಿ ತಮ್ಮ ಸರ್ಕಾರ ಪ್ರಯತ್ನಿಸಲಿದೆ ಎಂದು ಎಂ.ಕೆ.ಸ್ವಾಲಿನ್ ಹಿಂದೊಮ್ಮೆ ಹೇಳಿದ್ದರು. ಈ ಮೂಲಕ ಅವರು ಭಾರತದ ಬಹುಭಾಷಾ ಸಂಸ್ಕೃತಿಯ ರಕ್ಷಣೆಯನ್ನು ಪ್ರತಿಪಾದಿಸಿದ್ದರು.