HEALTH TIPS

ಹಣದುಬ್ಬರ, ಜಿಎಸ್ಟಿ ಏರಿಕೆ ವಿರುದ್ಧ ವಿಪಕ್ಷಗಳ ಪ್ರತಿಭಟನೆ: ಸಂಸತ್ತಿನ ಉಭಯ ಸದನಗಳ ಮುಂದೂಡಿಕೆ

                     ನವದೆಹಲಿ:ಹಣದುಬ್ಬರ ಮತ್ತು ಜಿಎಸ್ಟಿ ಏರಿಕೆ ಕುರಿತು ಚರ್ಚೆಗೆ ಆಗ್ರಹಿಸಿ ಪ್ರತಿಪಕ್ಷಗಳ ಪ್ರತಿಭಟನೆಗಳ ನಡುವೆಯೇ ಮಂಗಳವಾರ ಸಂಸತ್ತಿನ ಉಭಯ ಸದನಗಳನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಇದಕ್ಕೂ ಮುನ್ನ ಸತತ ಎರಡನೇ ದಿನಕ್ಕೂ ಮುಂದುವರಿದ ಪ್ರತಿಭಟನೆಯಿಂದಾಗಿ ಉಭಯ ಸದನಗಳನ್ನು ಅಪರಾಹ್ನ ಎರಡು ಗಂಟೆಯವರೆಗೆ ಮುಂದೂಡಲಾಗಿತ್ತು.

                ಉಭಯ ಸದನಗಳಲ್ಲಿ ಚರ್ಚೆಗೆ ಅವಕಾಶ ನಿರಾಕರಿಸಲ್ಪಟ್ಟ ಬಳಿಕ ಪ್ರತಿಪಕ್ಷ ಸದಸ್ಯರು ಸಂಸತ್ ಸಂಕೀರ್ಣದಲ್ಲಿಯ ಮಹಾತ್ಮಾ ಗಾಂಧಿ ಪ್ರತಿಮೆಯ ಎದುರು ಇನ್ನೊಂದು ಸುತ್ತು ಪ್ರತಿಭಟನೆ ನಡೆಸಿದರು.

                ರಾಹುಲ್ ಗಾಂಧಿ ಸೇರಿದಂತೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿಯ ಕಾಂಗ್ರೆಸ್ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ ರಂಜನ ಚೌಧುರಿ ಅವರೂ ಉಪಸ್ಥಿತರಿದ್ದರು.

ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಎಲ್ಪಿಜಿ ಬೆಲೆ ಏರಿಕೆಯನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸಿದರು. ಎನ್ಸಿಪಿಯ ಸುಪ್ರಿಯಾ ಸುಳೆ, ಎಸ್ಪಿಯ ರಾಮಗೋಪಾಲ್ ಯಾದವ್ ಮತ್ತು ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಸೇರಿದಂತೆ ಇತರ ಪ್ರತಿಪಕ್ಷ ಸಂಸದರೂ ಉಪಸ್ಥಿತರಿದ್ದರು.

                ಪೂರ್ವಾಹ್ನ 11 ಗಂಟೆಗೆ ರಾಜ್ಯಸಭೆಯು ಸಮಾವೇಶಗೊಂಡಾಗ ಖರ್ಗೆ ಮತ್ತು ಇತರ ನಾಯಕರು ಹಣದುಬ್ಬರ ಮತ್ತು ಜಿಎಸ್ಟಿ ಏರಿಕೆ ಕುರಿತು ಚರ್ಚಿಸಲು ಕಲಾಪ ಪಟ್ಟಿಯಲ್ಲಿನ ವಿಷಯಗಳ ಚರ್ಚೆಯನ್ನು ಅಮಾನತುಗೊಳಿಸುವಂತೆ ಕೋರಿ ನಿಯಮ 267ರಡಿ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ನೋಟಿಸ್ಗಳನ್ನು ಸಲ್ಲಿಸಿದರು. ಆದರೆ ಈ ನೋಟಿಸ್ಗಳನ್ನು ತಿರಸ್ಕರಿಸಿದ ನಾಯ್ಡು,ನಂತರದ ದಿನಾಂಕದಂದು ಬೆಲೆಏರಿಕೆ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಗೆ ತಾನು ಸಿದ್ಧನಿದ್ದೇನೆ. ಆ ಕುರಿತು ತನಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರು. ‌

ಆದರೆ ಪ್ರತಿಭಟನೆಯನ್ನು ಮುಂದುವರಿಸಿದ ಪ್ರತಿಪಕ್ಷ ಸದಸ್ಯರು ತಮ್ಮ ಆಸನಗಳಿಗೆ ಮರಳಲು ನಿರಾಕರಿಸಿದರು. ಈ ವೇಳೆ ನಾಯ್ಡು ಅಪರಾಹ್ನ ಎರಡು ಗಂಟೆಯವರೆಗೆ ಸದನವನ್ನು ಮುಂದೂಡಿದರು. ಭೋಜನದ ಬಳಿಕವೂ ಸದನದಲ್ಲಿ ಜಿಎಸ್ಟಿ ಪರಿಷ್ಕರಣೆ ವಿರುದ್ಧ ಪ್ರತಿಭಟನೆಗಳು ಮುಂದುವರಿಯುತ್ತವೆ ಎಂದು ಖರ್ಗೆ ಎಚ್ಚರಿಕೆ ನೀಡಿದರು.

               ಮೊಸರು,ಪನ್ನೀರ್ ಮತ್ತು ಇತರ ದಿನಬಳಕೆಯ ಸರಕುಗಳ ಮೇಲೆ ಶೇ.5ರಷ್ಟು ಜಿಎಸ್ಟಿಯನ್ನು ಹೇರಿರುವುದು ಜನಸಾಮಾನ್ಯರಿಗೆ ತೊಂದರೆಯನ್ನುಂಟು ಮಾಡುತ್ತದೆ ಎಂದು ಅವರು ಹೇಳಿದರು. ಈ ನಡುವೆ ಅತ್ತ ಲೋಕಸಭೆಯಲ್ಲಿ ಕಾಂಗ್ರೆಸ್,ಟಿಎಂಸಿ ಮತ್ತು ಡಿಎಂಕೆ ನಾಯಕರು ಕೆಲವು ಸರಕುಗಳ ಮೇಲೆ ಜಿಎಸ್ಟಿ ಹೇರಿಕೆಯ ವಿರುದ್ಧ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.

ತಮ್ಮ ಆಸನಗಳಿಗೆ ಮರಳುವಂತೆ ಮತ್ತು ರೈತರ ಸಮಸ್ಯೆ ಕುರಿತು ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಸ್ಪೀಕರ್ ಓಂ ಬಿರ್ಲಾ ಅವರು ಪ್ರತಿಪಕ್ಷ ನಾಯಕರನ್ನು ಕೋರಿಕೊಂಡರು.

                ನಿಮ್ಮ ಬಳಿ ನಿಯಮಗಳ ಪುಸ್ತಕವಿದೆ,ಆದರೆ ನೀವು ನಿಯಮಗಳನ್ನು ಅನುಸರಿಸುವುದಿಲ್ಲ. ಭಿತ್ತಿಪತ್ರಗಳನ್ನು ತರುವುದನ್ನು ನಿಯಮಗಳು ನಿಷೇಧಿಸಿವೆ,ಆದರೆ ನೀವು ಅವುಗಳನ್ನು ಹಿಡಿದುಕೊಂಡಿದ್ದೀರಿ. ನೀವು ಸದನದ ಹೊರಗೆ ರೈತರ ಸಮಸ್ಯೆಗಳನ್ನು ಎತ್ತುತ್ತೀರಿ,ಆದರೆ ಸದನದ ಒಳಗೆ ಅಲ್ಲ ಎಂದು ಸ್ಪೀಕರ್ ಹೇಳಿದರು.

              ಬೆಲೆಏರಿಕೆ ಮತ್ತು ಜಿಎಸ್ಟಿ ಕುರಿತು ಚರ್ಚೆಗೆ ಸ್ಪೀಕರ್ ಅವಕಾಶ ನಿರಾಕರಿಸಿದಾಗ ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆಯನ್ನು ಮುಂದುವರಿಸಿದ ಹಿನ್ನೆಲೆಯಲ್ಲಿ ಸದನವನ್ನು ಅಪರಾಹ್ನ ಎರಡು ಗಂಟೆಯವರೆಗೆ ಮುಂದೂಡಲಾಗಿತ್ತು. ಸದನವು ಮರುಸಮಾವೇಶಗೊಂಡಾಗಲೂ ಪ್ರತಿಭಟನೆ ಮುಂದುವರಿದಾಗ ಸ್ಪೀಕರ್ ದಿನದ ಮಟ್ಟಿಗೆ ಮುಂದೂಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries