ನವದೆಹಲಿ: 'ಕೆಲವರು ಧರ್ಮ ಮತ್ತು ಸಿದ್ಧಾಂತದ ಹೆಸರಿನಲ್ಲಿ ಹಗೆತನ ಸೃಷ್ಟಿಸುತ್ತಿದ್ದು, ಇದು ಇಡೀ ದೇಶದ ಮೇಲೆ ಪರಿಣಾಮ ಬೀರುತ್ತಿದೆ. ಇದನ್ನು ತಡೆಯಲು ಧಾರ್ಮಿಕ ನಾಯಕರು ಜತೆಯಾಗಿ ಕೆಲಸ ಮಾಡಬೇಕಿದೆ' ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಅಭಿಪ್ರಾಯಪಟ್ಟಿದ್ದಾರೆ.
ತಪ್ಪು ತಿಳಿವಳಿಕೆಗಳನ್ನು ದೂರ ಮಾಡಲು ಪ್ರಯತ್ನಿಸಬೇಕಾಗಿದೆ. ಪ್ರತಿಯೊಂದು ಧರ್ಮದವರೂ ಭಾರತದ ಭಾಗವೆಂದು ಭಾವಿಸುವಂತೆ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.
'ಅಖಿಲ ಭಾರತ ಸೂಫಿ ಸಜ್ಜದನಶಿನ್ ಮಂಡಳಿಯು (ಎಐಎಸ್‌ಎಸ್‌ಸಿ)' ದೆಹಲಿಯ 'ಕಾನ್‌ಸ್ಟಿಟ್ಯೂಷನ್ ಕ್ಲಬ್'ನಲ್ಲಿ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಧಾರ್ಮಿಕ ಮುಖಂಡರ ಸಮಕ್ಷಮದಲ್ಲಿ ಡೊಭಾಲ್ ಮಾತನಾಡಿದ್ದಾರೆ.
'ಕೆಲವರು ಧರ್ಮದ ಹೆಸರಿನಲ್ಲಿ ಹಗೆತನ ಬಿತ್ತುತ್ತಿದ್ದು, ಅದು ಇಡೀ ರಾಷ್ಟ್ರದ ಮೇಲೆ ಪರಿಣಾಮ ಬೀರುತ್ತಿದೆ. ಇದಕ್ಕೆ ನಾವು ಮೂಕಪ್ರೇಕ್ಷಕರಾಗಲು ಸಾಧ್ಯವಿಲ್ಲ. ಇದರ ತಡೆಗೆ ನಾವೆಲ್ಲ ಜತೆಯಾಗಿ ಕೆಲಸ ಮಾಡಬೇಕಿದೆ. ಎಲ್ಲ ಧರ್ಮಗಳ ಸಂಸ್ಥೆಗಳಲ್ಲಿಯೂ ತಾವು ಭಾರತದ ಭಾಗವೆಂಬ ಭಾವನೆ ಬರುವಂತೆ ಮಾಡಬೇಕಿದೆ. ನಾವು ಜತೆಯಾಗಿ ಸಾಗಬೇಕಿದೆ' ಎಂದು ಅವರು ಹೇಳಿದ್ದಾರೆ.
ಪಿಎಫ್‌ಐಯಂತಹ ಸಂಘಟನೆಗಳು ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಇತರ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆ ಸರ್ಕಾರವನ್ನು ಆಗ್ರಹಿಸಲು ಸಮ್ಮೇಳನದಲ್ಲಿ ಧಾರ್ಮಿಕ ನಾಯಕರು ನಿರ್ಣಯ ಕೈಗೊಂಡಿದ್ದಾರೆ.