ಛತ್ತೀಸ್‌ಗಢ: ಮಳೆ ಪೀಡಿತ ಬಿಜಾಪುರ ಜಿಲ್ಲೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ತಂಡವು ನೆರವಾಗಿದ್ದು ಬುಡಕಟ್ಟು ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದು ತಾಯಿ, ಮಗು ಸುರಕ್ಷಿತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೃಹರಕ್ಷಕ ದಳದ ಸಿಬ್ಬಂದಿ ಜಿಲ್ಲೆಯ ಮಳೆ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಈ ವೇಳೆ ಉಪ ಆರೋಗ್ಯ ಕೇಂದ್ರಕ್ಕೆ ಗರ್ಭಿಣಿ ಮಹಿಳೆಯೊಬ್ಬರನ್ನು ಸ್ಥಳಾಂತರಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಲ್ಲೆಯ ಗಂಗಲೂರು ತಹಸಿಲ್‌ನ ಜೋರ್ಗಯಾ ಗ್ರಾಮದ ಬಳಿ ಸಿಬ್ಬಂದಿ ಮಹಿಳೆಯನ್ನು ರಕ್ಷಣಾ ದೋಣಿಗೆ ಕರೆದೊಯ್ಯುತ್ತಿದ್ದಾಗ ಸರಿತಾ ಗೊಂಡಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆಕೆಗೆ ಸ್ಟ್ರೆಚರ್‌ನಲ್ಲಿಯೇ ಹೆರಿಗೆಯಾಗಿದ್ದು, ನವಜಾತ ಶಿಶು ಮತ್ತು ತಾಯಿ ಇಬ್ಬರನ್ನೂ ರಕ್ಷಣಾ ದೋಣಿಯಲ್ಲಿ ನದಿ ದಾಟಿ ರೆಡ್ಡಿ ಗ್ರಾಮದ ಉಪ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
ಬಿಜಾಪುರ, ದಾಂತೇವಾಡ, ಸುಕ್ಮಾ ಮತ್ತು ನಾರಾಯಣಪುರ ಜಿಲ್ಲೆಗಳ ಒಳನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಛತ್ತೀಸ್‌ಗಢ ಮತ್ತು ತೆಲಂಗಾಣದ ಗಡಿಯಲ್ಲಿ ಹರಿಯುವ ಗೋದಾವರಿ ನದಿಯ ಹಿನ್ನೀರಿನಿಂದ ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಕೈಗಾರಿಕೆ ಸಚಿವ ಕವಾಸಿ ಲಖ್ಮಾ ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಗಳಿಗೆ ಭೇಟಿ ನೀಡಿ ನಿರಂತರ ಮಳೆಯಿಂದ ಹೊರಹೊಮ್ಮುತ್ತಿರುವ ಪರಿಸ್ಥಿತಿಯನ್ನು ಅವಲೋಕಿಸಿದರು. ತುರ್ತು ಪರಿಸ್ಥಿತಿಯನ್ನು ಎದುರಿಸಲು ರಕ್ಷಣಾ ತಂಡಗಳನ್ನು ಅಲರ್ಟ್ ಆಗಿ ಇರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಕಂದಾಯ, ಜಿಲ್ಲಾ ಪಂಚಾಯತ್, ಜನಪದ ಪಂಚಾಯತ್ ಮತ್ತು ಅರಣ್ಯ ಇಲಾಖೆಗಳ ಅಧಿಕಾರಿಗಳು ಸಂತ್ರಸ್ತ ಜನರಿಗೆ ಪರಿಹಾರವನ್ನು ಒದಗಿಸುವಂತೆ ಕೋರಲಾಗಿದೆ ಎಂದು ಅವರು ಹೇಳಿದರು.
ಕೇರಳದಲ್ಲಿ ಭಾರೀ ಮಳೆ ಮುಂದುವರಿದಿದ್ದು, ಕೆಲವು ಅಣೆಕಟ್ಟುಗಳ ಒಳಹರಿವು ಅಪಾಯ ಮಟ್ಟ ತಲುಪಿದೆ
ಕೇರಳದಲ್ಲಿ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ರಾಜ್ಯದ ಮುಲ್ಲಪೆರಿಯಾರ್ ಮತ್ತು ಇಡುಕ್ಕಿ ಸೇರಿದಂತೆ ಹಲವು ಅಣೆಕಟ್ಟುಗಳಲ್ಲಿನ ನೀರಿನ ಮಟ್ಟವು ಆಯಾ ಸಂಗ್ರಹ ಸಾಮರ್ಥ್ಯಗಳನ್ನು ತಲುಪುತ್ತಿದೆ ಮತ್ತು ಕೆಲವು ಭಾನುವಾರ ರೆಡ್ ಅಲರ್ಟ್ ಸ್ಥಿತಿಯನ್ನು ತಲುಪಿದೆ.
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಕೆಎಸ್‌ಡಿಎಂಎ) ಒದಗಿಸಿದ ಅಂಕಿಅಂಶಗಳ ಪ್ರಕಾರ, ಆರು ಅಣೆಕಟ್ಟುಗಳು ಅದರಲ್ಲಿ ನಾಲ್ಕು ಅಣೆಕಟ್ಟುಗಳು ಇಡುಕ್ಕಿಯಲಿದ್ದು ಕೇರಳ ರಾಜ್ಯ ವಿದ್ಯುತ್ ಮಂಡಳಿ (ಕೆಎಸ್‌ಇಬಿ) ನಿಯಂತ್ರಣದಲ್ಲಿದೆ. ಮೂರು ರೆಡ್ ಅಲರ್ಟ್ ಮಟ್ಟದಲ್ಲಿದ್ದು ಒಂದರಲ್ಲಿ ಆರೆಂಜ್ ಅಲರ್ಟ್ ಇದೆ ಎಂದರು.
ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಪ್ರಕಾರ ಇಡುಕ್ಕಿ, ಮಲಪ್ಪುರಂ, ಕೋಯಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಹಳದಿ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದಲ್ಲಿ ಬಲವಾದ ಗಾಳಿ ಬೀಸುವ ನಿರೀಕ್ಷೆಯಿರುವುದರಿಂದ ಜನರು ಬಿರುಗಾಳಿ ಅಪಾಯಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಸಿಎಂ ಪಿಣರಾಯಿ ವಿಜಯನ್ ಕೇಳಿಕೊಂಡಿದ್ದಾರೆ.