ಕೋಝಿಕ್ಕೋಡ್: ಭಾನುವಾರ ಟ್ರಿಪ್ ರದ್ದು ಮಾಡುವ ಖಾಸಗಿ ಬಸ್‍ಗಳಿಗೆ ಕೋಝಿಕ್ಕೋಡ್ ಮೋಟಾರು ವಾಹನ ಇಲಾಖೆ ದಂಡ ವಿಧಿಸುತ್ತದೆ. ಟ್ರಿಪ್ ನಿಲ್ಲಿಸಿದ ಆರು ಖಾಸಗಿ ಬಸ್ ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸಾರಿಗೆ ಆಯುಕ್ತರ ಸೂಚನೆಯಂತೆ ಕ್ರಮ ಕೈಗೊಳ್ಳಲಾಗಿದೆ. ಕೋಝಿಕ್ಕೋಡ್ ಜಿಲ್ಲೆಯಲ್ಲಿ ಖಾಸಗಿ ಬಸ್‍ಗಳು ಭಾನುವಾರ ಟ್ರಿಪ್ ರದ್ದುಗೊಳಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಮೋಟಾರು ವಾಹನ ಇಲಾಖೆ ತಪಾಸಣೆಯನ್ನು ತೀವ್ರಗೊಳಿಸಿದೆ. ಟ್ರಿಪ್ ರದ್ದುಪಡಿಸಿದ ಬಸ್ ಗಳಿಗೆ 7,500 ರೂ.ದಂಡ ಮುಲಾಜಿಲ್ಲದೆ ಹೇರಲಾಗಿದೆ.
ಭಾನುವಾರ ಲಾಭದಾಯಕವಾಗಿ ಸೇವೆಯನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಸಂಚಾರ ರದ್ದುಗೊಳಿಸುತ್ತಿರುವುದು ಕೇವಲ ಕೋಝಿಕ್ಕೋಡ್ ಜಿಲ್ಲೆಯೊಂದರಲ್ಲೇ ಅಲ್ಲ. ಕಾಸರಗೋಡು ಸಹಿತ ಎಲ್ಲೆಡೆ ಕೋವಿಡ್ ಬಳಿಕ ಇಂತಹದೊಂದು ರೋಗ ಅಂಟಿಕೊಂಡಿದೆ. ಆದರೆ ಟ್ರಿಪ್ ನಿಲ್ಲಿಸುವುದು ಪರ್ಮಿಟ್ ಸೂಚನೆಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಸೂಚಿಸಿ ಕೋಝಿಕ್ಕೋಡ್ ನಲ್ಲಿ ಬಸ್ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರ ದೂರುಗಳಿಗೆ ಮುನ್ನ ಪ್ರತಿ ಭಾನುವಾರವೂ ತಪಾಸಣೆ ಮುಂದುವರಿಸಲು ಮೋಟಾರು ವಾಹನ ಇಲಾಖೆ ನಿರ್ಧರಿಸಿದೆ.
ಭಾನುವಾರ ಟ್ರಿಪ್ ರದ್ದಾಗಿದ್ದರಿಂದ ಪ್ರಯಾಣಿಕರು ತೀವ್ರ ಪ್ರಯಾಣದ ಸಮಸ್ಯೆ ಎದುರಿಸುತ್ತಿದ್ದರು. ಭಾನುವಾರ ರಜೆ ಇಲ್ಲದೇ ಇರುವವರಿಗೆ ಪಟ್ಟಣಗಳಿಗೆ ಹಾಗೂ ಸಮೀಪದ ವ್ಯಾಪಾರಸ್ಥರಿಗೆ ಕೆಲಸಕ್ಕೆ ತೆರಳುವವರು ಬಸ್ ಸೇವೆ ಇಲ್ಲದ ಕಾರಣ ಹಲವು ತೊಂದರೆಗಳನ್ನು ಎದುರಿಸಬೇಕಾಯಿತು. ಈ ಹಿನ್ನೆಲೆಯಲ್ಲಿ ಸ್ಥಳೀಯರು ಮೋಟಾರು ವಾಹನ ಇಲಾಖೆಗೆ ದೂರು ನೀಡಿದ್ದು, ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಕಾಸರಗೋಡಿನ ಹಲೆವೆಡೆಯೂ ಇಂತಹ ಅವ್ಯವಸ್ಥೆಯಿದ್ದು ಸಾರ್ವಜನಿಕರು ಅಧಿಕೃತರಿಗೆ ದೂರು ನೀಡಬಹುದಾಗಿದೆ.