ಕಾಸರಗೋಡು: ಪ್ರಾಕೃತಿಕ ಸಂಪನ್ಮೂಲಗಳ ದುರ್ಬಳಕೆ ತಡೆಗಟ್ಟುವುದರ ಜತೆಗೆ ಪರಿಸರ ಸಂರಕ್ಷಣೆ ಕಾರ್ಯಗಳಿಂದ ಮಾತ್ರ ಭವಿಷ್ಯದಲ್ಲಿ ಜೀವಸಂಕುಲಗಳನ್ನು ಕಾಪಾಡಲು ಸಾಧ್ಯ ಎಂದು ಉದ್ಯಮಿ, ಕೃಷಿಪ್ರೇಮಿ ಸುಧೀರ್‍ಕುಮಾರ್ ಶೆಟ್ಟಿ ಎಣ್ಮಕಜೆ ತಿಳಿಸಿದ್ದಾರೆ.
ಅವರು ತಮ್ಮ ಕೃಷಿಭೂಮಿಯಲ್ಲಿ ಶೇಣಿ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸ್ಸೆಸ್)ವತಿಯಿಂದ ಆಯೋಜಿಸಲಾದ 'ಹೊಸ ಚಿಗುರು ಬೆಳೆಯಲಿ'ಅಭಿಯಾನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶೇಣಿ ಶಾಲಾ ಶಿಕ್ಷಕ, ಉತ್ತಮ ಕೃಷಿಕ ಪ್ರಶಸ್ತಿ ವಿಜೇತ ಶ್ರೀಧರ ಮಾಸ್ಟರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮನುಷ್ಯರ ಭೋಗಾಸಕ್ತಿಗಾಗಿ ನಡೆಯುತ್ತಿರುವ ಪ್ರಕೃತಿಯ ಶೋಷಣೆಗೆ ಭಾರಿ ಬೆಲೆ ತೆರಬೇಕಾದ ಅನಿವಾರ್ಯತೆ ಎದುರಾಗುತ್ತಿರುವುದಾಗಿ ತಿಳಿಸಿದರು. ಈ ಸಂದರ್ಭ ಕೃಷಿಭೂಮಿಯಲ್ಲಿ 200ಕ್ಕೂ ಹೆಚ್ಚು ಬೀಜಗಳನ್ನು ಬಿತ್ತಲಾಯಿತು. ಶಾಲಾ ಪ್ರಭಾರ ಪ್ರಾಂಶುಪಾಲೆ ವಿಜಯಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಯ್ದೀನ್ ಕುಟ್ಟಿ, ಶಿಕ್ಷಕರಾದ ಶಾಸ್ತ ಕುಮಾರ್, ಅನೀಶ್ ಕುಮಾರ್, ದಿಲೀಪ್ ಮಾಧವ, ಪ್ರಸನ್ನ ಕುಮಾರಿ, ಬೋಧಕೇತರ ಸಿಬ್ಬಂದಿ ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಸಂತೋಷ್ ಕ್ರಾಸ್ತ ಸ್ವಾಗತಿಸಿದರು. ವಿದ್ಯಾರ್ಥಿ ಆಯಿಷತ್ ಶಬ್ನಾ ವಂದಿಸಿದರು.