ಕಾಸರಗೋಡು: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಬಿರುಸಿನ ಮಳೆ ಮುಂದುವರಿಯುತ್ತಿದ್ದು, ಹಾನಿ ಪ್ರಮಾಣವೂ ಹೆಚ್ಚುತ್ತಿದೆ. ಮಹಿಳೆ ಕೆರೆಗೆ ಬಿದ್ದು ಮೃತಪಟ್ಟಿದ್ದರೆ, ನೀರಲ್ಲಿ ಕೊಚ್ಚಿಹೋಗುತ್ತಿದ್ದ ಯುವಕನನ್ನು ನಾಗರಿಕರು ರಕ್ಷಿಸಿದ್ದಾರೆ. ರಾಜ್ಯದ 12ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಪಾಣತ್ತೂರು ಕುಲ್ಲೋ ಸನಿಹ ಪನತ್ತಡಿ ಸೇತುವೆ ಬಳಿ ನೀರಿನ ಸೆಳೆತಕ್ಕೆ ಸಿಲುಕಿ ಬೈಕ್ ಸಹಿತ ಸವಾರ ಕೊಚ್ಚಿಕೊಂಡು ಹೋಗಿದ್ದು, ಸ್ಥಳೀಯರ ಸಕಾಲಿಕ ಕಾರ್ಯಾಚರಣೆಯಿಂದ ಯುವಕನನ್ನು ರಕ್ಷಿಸಲಾಗಿದೆ. ಬೈಕನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಪಾಣತ್ತೂರು ಕಲ್ಲಪಳ್ಳಿ ನಿವಾಸಿ ಪವನ್‍ಕುಮಾರ್ ನೀರಿನ ಸೆಳೆತಕ್ಕೆ ಸಿಲುಕಿ ಪಾರಾದವರು. ಸೇತುವೆಯಲ್ಲಿ ಅಡ್ಡದಾಟುತ್ತಿದ್ದ ಸಂದರ್ಭ ಬೈಕ್ ಸಹಿತ ನೀರಲ್ಲಿ ಕೊಚ್ಚಿಹೋಗಿದ್ದರು. ಸೇತುವೆಯಲ್ಲಿ ಸಂಚಾರಕ್ಕೆ ಹೇರಿದ್ದ ನಿಷೇಧದ ನಡುವೆಯೂ ಇವರು ಬೈಕ್ ಚಲಾಯಿಸಿದ್ದರು. ಹಗ್ಗದ ಸಹಾಯದಿಂದ ಹರಸಾಹಸದೊಂದಿಗೆ ಇವರನ್ನು ರಕ್ಷಿಸಲಾಗಿದೆ.
ಇನ್ನೊಂದು ಘಟನೆಯಲ್ಲಿ ಎಣ್ಣಪ್ಪಾರ ಮುಕ್ಕುಳದಲ್ಲಿ ಮುಕ್ಕುಳ ನಿವಾಸಿ ಇಂದಿರಾ(55)ಎಂಬವರ ಮೃತದೇಹ ಮನೆ ಸನಿಹದ ಕೆರೆಯಲ್ಲಿ ಪತ್ತೆಯಾಗಿದೆ. ಜಿಲ್ಲೆಯ ಬಹುತೇಕ ಕಡೆ ಮರಗಳು ಉರುಳಿಬಿದ್ದು, ವಿದ್ಯುತ್ ಸಂಪರ್ಕ ಅಸ್ತವ್ಯಸ್ತಗೊಂಡಿದೆ. ಬಿರುಸಿನ ಮಳೆ ಹಿನ್ನೆಲೆಯಲ್ಲಿ ಕಣ್ಣೂರು ವಿಶ್ವ ವಿದ್ಯಾಲಯದ ಎಲ್ಲಾ ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ಜಿಲ್ಲೆಯಲ್ಲಿ ಅಪಾರ ಕೃಷಿ ನಾಶ ಸಂಭವಿಸಿದೆ.