ತಿರುವನಂತಪುರ: ಇಂಡಿಗೋ ವಿಮಾನದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆಯಲ್ಲಿ ಎಲ್ ಡಿ ಎಫ್ ಸಂಚಾಲಕ ಇಪಿ ಜಯರಾಜನ್ ವಿರುದ್ಧ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಸಲ್ಲಿಸಿದ ಅರ್ಜಿಯ ಮೇರೆಗೆ ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಆದೇಶಿಸಿದೆ. ಮುಖ್ಯಮಂತ್ರಿ ಅವರ ಆಪ್ತ ಸಿಬ್ಬಂದಿ ವಿರುದ್ಧವೂ ಪ್ರಕರಣ ದಾಖಲಿಸಲು ಆದೇಶವಿದೆ.
ವಿಮಾನದಲ್ಲಿ ನಡೆದ ಸಂಘರ್ಷದಲ್ಲಿ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಕೆ.ಎಸ್.ಶಬರೀನಾಥ್ ಸೇರಿದಂತೆ ನಾಲ್ವರ ವಿರುದ್ಧ ಮಾತ್ರ ಪೋಲೀಸರು ಪ್ರಕರಣ ದಾಖಲಿಸಿದ್ದರು. ಆದರೆ ಗಂಭೀರ ಅಪರಾಧ ಎಸಗಿರುವ ಇಪಿ ಜಯರಾಜನ್ ವಿರುದ್ಧ ಯುವ ಕಾಂಗ್ರೆಸ್ ತೀವ್ರ ಪ್ರತಿಭಟನೆ ನಡೆಸಿತ್ತು. ಈ ಮಧ್ಯೆ, ಇಪಿ ಗಂಭೀರ ಅಪರಾಧಿ ಎಂದು ಕಂಡುಬಂದ ನಂತರ ಇಂಡಿಗೋ ಏರ್‍ಲೈನ್ಸ್ ಅವರನ್ನು ಪ್ರಯಾಣಿಸದಂತೆ ನಿಷೇಧಿಸಿದೆ. ಇದರೊಂದಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಇಪಿ ವಿರುದ್ಧ ಪ್ರಕರಣಕ್ಕೆ ಆಗ್ರಹಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಇಪಿ ಜೊತೆಗೆ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳಾದ ಅನಿಲ್ ಕುಮಾರ್ ಮತ್ತು ಸುನೀಶ್ ವಿರುದ್ಧವೂ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಸೂಚಿಸಿದೆ.
ಪ್ರಕರಣವನ್ನು ಕೈಗೆತ್ತಿಕೊಳ್ಳುವಂತೆ ಪೆÇಲೀಸರಿಗೆ ಸೂಚಿಸಲಾಗಿದೆ. ನರಹತ್ಯೆ ಯತ್ನ ಮತ್ತು ಕೊಲೆಗೆ ಕ್ರಿಮಿನಲ್ ಸಂಚು ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲು ಉದ್ದೇಶಿಸಲಾಗಿದೆ. ಈ ಹಿಂದೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಇಪಿ ಜಯರಾಜನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಜಿಪಿಗೆ ಹಲವು ಬಾರಿ ದೂರು ಸಲ್ಲಿಸಿದ್ದರು. ಆದರೆ ಇದು ವಿಫಲವಾದ ಹಿನ್ನೆಲೆಯಲ್ಲಿ ಕಾರ್ಯಕರ್ತರು ನ್ಯಾಯಾಲಯದ ಮೊರೆ ಹೋಗಿದ್ದರು.