ತಿರುವನಂತಪುರ : ರೈಲೊಳಗೆ ಹಾವೊಂದು ಹೊಕ್ಕಿಕೊಂಡು ಪ್ರಯಾಣಿಕರನ್ನು ಬೆಚ್ಚಿಬೀಳಿಸಿರೋ ಘಟನೆ ತಿರುವನಂತಪುರ- ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ.
ಸದ್ಯ ಈ ರೈಲಿನ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಹಾವಿನ ಹುಡುಕಾಟದಲ್ಲಿ ತೊಡಗಿದ್ದಾರೆ ಅರಣ್ಯ ಇಲಾಖೆ ಸಿಬ್ಬಂದಿ.
ಒಂದು ಗಂಟೆಗೂ ಅಧಿಕ ಕಾಲದಿಂದ ತಪಾಸಣೆ ನಡೆಯುತ್ತಿದ್ದು, ಹಾವಿನ ಸುಳಿವು ಇದುವರೆಗೆ ಸಿಕ್ಕಿಲ್ಲ ಎನ್ನಲಾಗಿದೆ.
ತಿರುವನಂತಪುರ- ನಿಜಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನ 5ನೇ ಬೋಗಿಯಲ್ಲಿ ಲಗೇಜ್‍ನ ಪಕ್ಕದಲ್ಲಿ ಈ ಹಾವು ಕಾಣಿಸಿಕೊಂಡಿತ್ತು. ಪ್ರಯಾಣಿಕರು ಇದನ್ನು ನೋಡಿ ಟಿಕೆಟ್ ಪರೀಕ್ಷಕರಿಗೆ ಮಾಹಿತಿ ನೀಡಿದ್ದರು. ಹಾವಿನ ಸುದ್ದಿ ಇಡೀ ರೈಲಿನ ತುಂಬ ಹರಡಿ ಪ್ರಯಾಣಿಕರು ಆತಂಕಕ್ಕೀಡಾದರು.
ಕೊನೆಗೆ ರೈಲಿನ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಕೋಳಿಕ್ಕೋಡ್ ನಿಲ್ದಾಣದಲ್ಲಿ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ತಲುಪಿದ ತಕ್ಷಣ ಅವರು ಹಾವನ್ನು ಪತ್ತೆ ಹಚ್ಚಲು ಉರಗ ತಜ್ಞರ ವ್ಯವಸ್ಥೆಯನ್ನು ಅರಣ್ಯ ಇಲಾಖೆಯವರು ಮಾಡಿದ್ದಾರೆ.
ರೈಲಿನಲ್ಲಿ ಹಾವನ್ನು ಕಂಡ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ಕಂಪಾರ್ಟ್‍ಮೆಂಟ್‍ನಲ್ಲಿದ್ದ ಎಲ್ಲಾ ಪ್ರಯಾಣಿಕರು ರೈಲಿನಿಂದ ಕೆಳಕ್ಕೆ ಇಳಿಸಲಾಗಿದೆ. ಹಾವು ಹಿಡಿಯುವವರು ರೈಲಿನಲ್ಲಿ ಸಂಪೂರ್ಣ ಹುಡುಕಾಟ ನಡೆಸಿದ್ದಾರೆ. ಆದರೂ ಹಾವನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಕಂಪಾರ್ಟ್‍ಮೆಂಟ್‍ನ ಪಕ್ಕದಲ್ಲಿರುವ ರಂಧ್ರದಲ್ಲಿ ತಪ್ಪಿಸಿಕೊಂಡು ಅಥವಾ ಅಡಗಿಕೊಂಡಿರಬಹುದು ಎಂದು ರೈಲ್ವೆ ಮೂಲಗಳು ಹೇಳಿದೆ.