ಬದಿಯಡ್ಕ : ಕರ್ಕಾಟಕ ಮಾಸದ ಒಂದು ತಿಂಗಳ ಕಾಲಾವಧಿಯಲ್ಲಿ ಕೇರಳಾದ್ಯಂತ ರಾಮಾಯಣ ಮಾಸಾಚರಣೆ ನಡೆದು ಬರಲಿದೆ. ಮನೆ, ದೇವಾಲಯ, ಮಂದಿರಗಳಲ್ಲಿ ರಾಮಾಯಣ ಪಾರಾಯಣ ಸಾಂಪ್ರದಾಯಿಕ ಶ್ರದ್ದೆಯಿಂದ ನಡೆಯುತ್ತಿದೆ. ಈ ಒಂದು ತಿಂಗಳ ಕಾಲಾವಧಿಯನ್ನು ರಾಮಾಯಣ ಮಾಸವೆಂದೂ ಕರೆಯಲಾಗುತ್ತದೆ. ನಾಡಿನ ದುರಿತ ನಿವಾರಣೆ ನಡೆಸುವುದೆಂಬ ನಂಬಿಕೆಯ ಆಟಿ ಕಳಂಜನ ಮನೆ ಸಂಚಾರವೂ ಈ ಕಾಲಾವಧಿಯಲ್ಲಿ ನಡೆದುಬರುತ್ತಿರುವುದು ವಾಡಿಕೆಯಾಗಿದೆ.
ಬದಿಯಡ್ಕ ಸಮೀಪದ ಕೆಡೆಂಜಿ ಶ್ರೀಮಹಾವಿಷ್ಣು ದೇವಾಲಯದಲ್ಲೂ ವರ್ಷಂಪ್ರತಿ ರಾಮಾಯಣ ಮಾಸಾಚರಣೆ ನಡೆಯುತ್ತಿದ್ದು, ಈ ವರ್ಷದ ಕಾರ್ಯಕ್ರಮ ನಿನ್ನೆ ಆರಂಭಗೊಂಡಿತು. ವಾಚಕರಾಗಿ ರವಿಕಾಂತ ಕೇಸರಿ ಕಡಾರು ಹಾಗೂ ಪ್ರವಚನಕಾರರಾಗಿ ಶ್ಯಾಮ ಆಳ್ವ ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ನಿನ್ನೆ ರಾಮಾಯಣಾಂತರ್ಗತ ಬಾಲಕಾಂಡದ ಆಯ್ದ ಭಾಗಗಳ ವಾಚನ-ಪ್ರವಚನ ನಡೆಯಿತು. ಇಂದು ಯಾಗ ಸಂರಕ್ಷಣೆಯ ಕಥಾಭಾಗದ ವಾಚನ ಪ್ರವಚನ ನಡೆಯಲಿದೆ.