HEALTH TIPS

ಕನ್ನಡದಲ್ಲಿ ವಿಜ್ಞಾನ: ಬೆಸೆಯುವ ಕೆಲಸವಾಗಲಿ

          ಕೇಂದ್ರ ಶಿಕ್ಷಣ ಸಚಿವಾಲಯದ ಅಡಿ ಕಾರ್ಯನಿರ್ವ ಹಿಸುವ ಸಿಎಸ್‍ಟಿಟಿ (Commission for Scientific and Technical Terminology) ಉಸ್ತುವಾರಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಹಿಂದಿ-

              ಇಂಗ್ಲಿಷ್-ಕನ್ನಡ ಮೂರು ಭಾಷೆಗಳಲ್ಲಿ ಪದಕೋಶ ರೂಪಿಸುವ ಯೋಜನೆ ಇನ್ನೇನು ಪೂರ್ಣಗೊಳ್ಳುವ ಹಂತದಲ್ಲಿದೆ.

             ವಿಜ್ಞಾನ- ತಂತ್ರಜ್ಞಾನದ ವಿಷಯಗಳಲ್ಲಿ ಬಳಸುವ ಇಂಗ್ಲಿಷ್ ಪದಗಳಿಗೆ ಸಮಾನಾರ್ಥಕ ಪದ ಹುಡುಕುವ ಅಥವಾ ಸೂಚಿಸುವ ಕಾರ್ಯಕ್ಕೆ ರಾಜ್ಯದ ವಿವಿಧ ಪದವಿ ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ಪ್ರಾಧ್ಯಾಪಕರನ್ನು ಬಳಸಿಕೊಳ್ಳಲಾಗಿದೆ.

          ಎಂಜಿನಿಯರಿಂಗ್ ಪದವಿ ಮತ್ತು ಡಿಪ್ಲೊಮಾ ಕೋರ್ಸುಗಳನ್ನು ಕನ್ನಡ ಮಾಧ್ಯಮದಲ್ಲಿ ಕಲಿಸುವ ಕುರಿತು ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ ಸಿಎಸ್‍ಟಿಟಿ ತಯಾರಿಸುತ್ತಿರುವ ತ್ರಿಭಾಷಾ ಪದಕೋಶ ಮಹತ್ವಪೂರ್ಣವಾದುದು. ಆದರೆ, ಈ ಪ್ರಕ್ರಿಯೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳನ್ನು ಬೋಧಿಸುವ ಅಧ್ಯಾಪಕರನ್ನು ಮಾತ್ರ ಒಳಗೊಂಡಿರುವುದರಿಂದ ಪದಕೋಶದ ಗುಣಮಟ್ಟದ ಕುರಿತು ಅನುಮಾನಗಳು ವ್ಯಕ್ತವಾಗಿವೆ. ಈಗಾಗಲೇ ರೂಪಿಸಲಾಗಿರುವ ಪದಕೋಶಗಳು, ಅನುವಾದಿತ ಮತ್ತು ನೇರವಾಗಿ ಕನ್ನಡದಲ್ಲೇ ಬರೆಯಲಾಗಿರುವ ವಿಜ್ಞಾನ ಮತ್ತು ತಂತ್ರಜ್ಞಾನದ ಪುಸ್ತಕಗಳೆಲ್ಲವನ್ನೂ ಅಂತರ್ಜಾಲ ತಾಣವೊಂದರಲ್ಲಿ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಸರ್ಕಾರ ಮುತುವರ್ಜಿ ತೋರಬೇಕಿದೆ.

             ಕೆಲ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಬಾರಿ ಪ್ರಾಯೋಗಿಕವಾಗಿ ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್ ಶಿಕ್ಷಣ ನೀಡಲು ಮುಂದಾಗಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಇದಕ್ಕೆ ಪೂರಕವಾಗಿ ತಯಾರಿಸಿ ಇಟ್ಟುಕೊಂಡಿದ್ದ ಪಠ್ಯ ಪುಸ್ತಕಗಳನ್ನು ಆಸಕ್ತರ ಓದು ಮತ್ತು ಪರಾಮರ್ಶನಕ್ಕೆ ಸುಲಭವಾಗಿ ಲಭ್ಯವಾಗಿಸುವ ಕೆಲಸ ಮಾಡಬಾರದೇ? ತನ್ನದೇ ವೆಬ್‍ಸೈಟ್‍ನಲ್ಲಾದರೂ ಹಾಕಬಾರದೇ? ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಇಂಗ್ಲಿಷ್ ಅಥವಾ ಕನ್ನಡ ಎರಡರಲ್ಲಿ ತಮಗೆ ಸೂಕ್ತವೆನಿಸುವ ಭಾಷೆಯಲ್ಲಿ ಉತ್ತರ ಬರೆಯುವ ಆಯ್ಕೆಯನ್ನು ಈ ಬಾರಿ ನೀಡಲಾಗಿದೆ. ಇದೇ ಆಯ್ಕೆಯನ್ನು ಮುಂದೆ ಎಂಜಿನಿಯರಿಂಗ್ ಸೇರಿದಂತೆ ಉಳಿದ ವಿಜ್ಞಾನ ಮತ್ತು ತಂತ್ರಜ್ಞಾನ ಪದವಿಗಳಿಗೂ ವಿಸ್ತರಿಸುವ ಪ್ರಯೋಗ ಮಾಡಲು ಹೊರಟಾಗ ಅದಕ್ಕೆ ಪೂರಕ ಸಂಪನ್ಮೂಲಗಳು ವಿದ್ಯಾರ್ಥಿಗಳಿಗೂ ಸುಲಭವಾಗಿ ಲಭ್ಯವಾಗುವಂತೆ ಇದ್ದರೆ ಒಳಿತಲ್ಲವೇ?

              ವಿಜ್ಞಾನ ವಿಷಯಗಳಲ್ಲಿ ಇಂಗ್ಲಿಷ್ ಪದಗಳಿಗೆ ಪರ್ಯಾಯವಾಗಿ ಪ್ರಸ್ತುತ ಬಳಸಲಾಗುತ್ತಿರುವ ಕನ್ನಡ ಪದಗಳು ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆಯಾಗಿರುವುದು ಕೂಡ ಬಹುಚರ್ಚಿತ ಅಂಶವೆ. ಇದನ್ನು ಸರಿಪಡಿಸುವ ಪ್ರಯತ್ನವನ್ನು ಕೆಲವರಾದರೂ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ. ಕನ್ನಡದಲ್ಲಿ ವಿಜ್ಞಾನ- ತಂತ್ರಜ್ಞಾನ ಹೇಳಿಕೊಡುವ ಸಲುವಾಗಿ ನಡೆಯುವ ಸರ್ಕಾರಿ ಕೆಲಸಗಳು ಆಯಾ ಸಂಸ್ಥೆ ಮತ್ತು ಶೈಕ್ಷಣಿಕ ವಲಯಕ್ಕೆ ಮಾತ್ರ ಸೀಮಿತಗೊಳ್ಳದೆ, ಇದಕ್ಕಾಗಿ ಸ್ವಂತ ಆಸಕ್ತಿಯಿಂದ ಶ್ರಮಿಸುತ್ತಿರುವವರನ್ನು ಸಹಭಾಗಿಯಾಗಿಸಿ ಕೊಳ್ಳುವ ಅಗತ್ಯವಿದೆ. 'ಹೊನಲು.ನೆಟ್' (https://honalu.net/) ಈ ದಿಸೆಯಲ್ಲಿ ಒಂದು ದಶಕದಿಂದ ಗಮನಾರ್ಹ ಕೆಲಸ ಮಾಡುತ್ತ ಬಂದಿದೆ.

ಸದ್ಯ ಸಿಎಸ್‍ಟಿಟಿ ಕೈಗೊಂಡಿರುವ ತ್ರಿಭಾಷಾ ಪದಕೋಶ ರೂಪಿಸುವ ಯೋಜನೆಗೆ ಪೂರಕವಾಗಿ ಬಳಸಲಾಗುತ್ತಿರುವುದು, ಅಂತರ್ಜಾಲದಲ್ಲಿ ಲಭ್ಯವಿರುವ ಮೈಸೂರು ವಿಶ್ವವಿದ್ಯಾಲಯದ ನಿಘಂಟು ಮತ್ತು ಗೂಗಲ್ ಟ್ರಾನ್ಸ್‌ಲೇಟರ್. ಗೂಗಲ್ ನೆರವಿನಿಂದ ಮಾಡಲಾದ ಅನುವಾದದ ಗುಣಮಟ್ಟ ಹೇಗಿರಬಹುದು ಎಂಬುದನ್ನು ಯಾರಾದರೂ ಊಹಿಸಬಹುದು. ಉದಾಹರಣೆಗೆ, ಇಂಗ್ಲಿಷ್‍ನ 'Torque' ಪದಕ್ಕೆ ಹೊನಲು.ನೆಟ್ ತಂಡ 'ತಿರುಗುಬಲ' ಪದ ಬಳಸಿದರೆ, ಮೈಸೂರು ವಿಶ್ವವಿದ್ಯಾಲಯದ ನಿಘಂಟಿನಲ್ಲಿ 'ಭ್ರಾಮಕ' ಎಂದಿದೆ. ಗೂಗಲ್ ಟ್ರಾನ್ಸ್‌ಲೇಟರ್ ಯಥಾವತ್ತು ಪದ ('ಟಾರ್ಕ್') ನೀಡುತ್ತಿದೆ. ಇಂಗ್ಲಿಷ್‍ನ 'Power' ಪದಕ್ಕೆ ನಿಘಂಟು ಹಾಗೂ ಗೂಗಲ್ ಟ್ರಾನ್ಸ್‌ಲೇಟರ್ 'ಶಕ್ತಿ', 'ಸಾಮರ್ಥ್ಯ' ಪದಗಳನ್ನು ಸೂಚಿಸಿದರೆ, ಹೊನಲು.ನೆಟ್ ತಂಡ 'ಕಸುವು' ಪದ ಬಳಸುತ್ತಿದೆ.

               ಮೈಸೂರು ವಿಶ್ವವಿದ್ಯಾಲಯವು ನಿಘಂಟನ್ನು ಯಾರಾದರೂ ಸುಲಭವಾಗಿ ಬಳಸಿಕೊಳ್ಳುವ ಸಾಧ್ಯತೆಯನ್ನು ಅಂತರ್ಜಾಲ ತಾಣದ ಮೂಲಕ ತೆರೆದಿಟ್ಟಿದೆ. ಇದೇ ರೀತಿ ಎಲ್ಲ ನಿಘಂಟು ಮತ್ತು ಸಂಪನ್ಮೂಲಗಳೂ ಸುಲಭವಾಗಿ ಲಭ್ಯವಾದರೆ, ಮುಂದೆ ಕನ್ನಡದಲ್ಲಿ ವಿಜ್ಞಾನ ಕಲಿಸುವ ಪ್ರಯತ್ನ ಪರಿಣಾಮ ಕಾರಿಯಾಗಲು ನೆರವಾಗಲಿದೆ. ಸಿಎಸ್‍ಟಿಟಿ ತಯಾರಿಸುತ್ತಿರುವ ತ್ರಿಭಾಷಾ ಪದಕೋಶವನ್ನು ಒಕ್ಕೂಟ ಸರ್ಕಾರದ ಅಡಿ ಕಾರ್ಯನಿರ್ವಹಿಸುವ ನೇಮಕಾತಿ ಆಯೋಗಗಳು ಬಳಸುವ ಸಾಧ್ಯತೆ ಇರುವುದರಿಂದ ಅದರ ಅಂತಿಮ ಕರಡನ್ನು ಸಾರ್ವಜನಿಕರ ಎದುರು ಇರಿಸಿ, ಆಕ್ಷೇಪ ಗಳನ್ನು ಆಹ್ವಾನಿಸಿ, ಅವುಗಳ ಪರಾಮರ್ಶೆಯ ನಂತರವಷ್ಟೇ ಬಳಕೆಗೆ ಪರಿಗಣಿಸುವಂತೆ ರಾಜ್ಯ ಸರ್ಕಾರವು ಸಿಎಸ್‍ಟಿಟಿ ಮೇಲೆ ಒತ್ತಡ ಹೇರಬೇಕಿದೆ. ಇಲ್ಲವಾದರೆ ಒಕ್ಕೂಟ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ನೇಮಕಾತಿ ಆಯೋಗಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವವರಿಗೂ ಮುಂಬರುವ ದಿನಗಳಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries