ಕುಂಬಳೆ: ಬಂದ್ಯೋಡಿನ ಕ್ರೀಡಾಸಾಮಗ್ರಿ ಮಾರಾಟದಂಗಡಿಯ ದಾಸ್ತಾನುಕೊಠಡಿಯಲ್ಲಿ ಗುಪ್ತ ಕ್ಯಾಮರಾ ಅಳವಡಿಸಿ ಬಾಲಕಿಯ ಬಟ್ಟೆ ಬದಲಾಯಿಸುವ ದೃಶ್ಯಾವಳಿ ಸೆರೆಹಿಡಿಯಲೆತ್ನಿಸಿದ ಅಂಗಡಿ ನೌಕರ, ಬಂದ್ಯೋಡು ಪಚ್ಚಂಬಳ ಅಡ್ಕ ನಿವಾಸಿ ಅಹಮ್ಮದ್ ಆಸಿಫ್(28)ನನ್ನು ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಪೋಕ್ಸೋ ಕಾಯ್ದೆಯನ್ವಯ ಕೇಸು ದಾಖಲಿಸಲಾಗಿದೆ.
ಶನಿವಾರ ಸಂಜೆ ಅಂಗಡಿಗೆ ಕ್ರೀಡಾ ಸಾಮಗ್ರಿ ಖರೀದಿಗೆ ಆಗಮಿಸಿದ್ದ 16ರ ಹರೆಯದ ಬಾಲಕಿಗೆ ಜೆರ್ಸಿ ಒಂದನ್ನು ಧರಿಸಿ ನೋಡುವಂತೆ ಒತ್ತಾಯಪೂರ್ವಕವಾಗಿ ದಾಸ್ತಾನು ಕೊಠಡಿಗೆ ಕಳುಹಿಸಿದ್ದಾನೆ. ಕೊಠಡಿಗೆ ತೆರಳಿದ ಬಾಲಕಿಗೆ ಸಂಶಯ ಬಂದು ಜೆರ್ಸಿ ಧರಿಸುವ ಮೊದಲು ಆ ವಠಾರದಲ್ಲಿ ಕಣ್ಣು ಹಾಯಿಸಿದಾಗ ಗುಪ್ತ ಕ್ಯಾಮರಾ ಪತ್ತೆಯಾಗಿದೆ. ಈ ವಿಷಯವನ್ನು ಸಂಬಂಧಿಕರಿಗೆ ತಿಳಿಸಿದ್ದಾಳೆ. ಈ ಬಗ್ಗೆ ಕುಂಬಳೆ ಠಾಣೆ ಪೊಲೀಸರಿಗೆ ನೀಡಿದ ದೂರಿನನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕ್ರೀಡಾ ಸಾಮಗ್ರಿ ಖರೀದಿಗೆ ಆಗಮಿಸಿದ ಬಾಲಕಿ ದೃಶ್ಯಾವಳಿ ಗೌಪ್ಯ ಕ್ಯಾಮರಾ ಮೂಲಕ ಚಿತ್ರೀಕರಿಸಲು ಯತ್ನ: ಅಂಗಡಿ ನೌಕರನ ಬಂಧನ
0
ಜುಲೈ 26, 2022