ಜೋಧಪುರ : ಭಾನುವಾರದಂದು ರಜೆ ನೀಡಲಿಲ್ಲವೆಂದು ಕೋಪಗೊಂಡ ಸಿಆರ್‌ಪಿಎಫ್ ಯೋಧ ಗುಂಡು ಹಾರಿಸಿಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳದಂತೆ ಅಧಿಕಾರಿಗಳು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.
ಜೋಧಪುರ : ಭಾನುವಾರದಂದು ರಜೆ ನೀಡಲಿಲ್ಲವೆಂದು ಕೋಪಗೊಂಡ ಸಿಆರ್‌ಪಿಎಫ್ ಯೋಧ ಗುಂಡು ಹಾರಿಸಿಕೊಂಡು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳದಂತೆ ಅಧಿಕಾರಿಗಳು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ.
ಪಾಲಡಿ ಕಿಂಚಿಯಾ ಎಂಬಲ್ಲಿನ ಸಿಆರ್‌ಪಿಎಫ್ ತರಬೇತಿ ಕೇಂದ್ರದ ವಸತಿಗೃಹದ ನಾಲ್ಕನೇ ಮಹಡಿಯ ತನ್ನ ಮನೆಯ ಕೋಣೆಯೊಂದರಲ್ಲಿ ಯೋಧ ನರೇಶ್, ಹೆಂಡತಿ ಮತ್ತು ಮಗಳೊಂದಿಗೆ ಸೇರಿಕೊಂಡಿದ್ದರು. ನಂತರ ಬಾಲ್ಕನಿಯಲ್ಲಿ ನಿಂತು ಹಲವು ಬಾರಿ ರೈಫಲ್ ತೋರಿಸಿ, ಗಾಳಿಯಲ್ಲಿ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದರು ಎಂದು ಪೊಲೀಸರು ತಿಳಿಸಿದರು.
ಆಗಿದ್ದೇನು?: ಭಾನುವಾರದಂದು ರಜೆ ಬೇಕೆಂದು ನರೇಶ್, ಡಿಐಜಿ ಅವರಲ್ಲಿ ಮನವಿ ಮಾಡಿದ್ದರು. ಆದರೆ, ರಜೆ ನೀಡಲು ಡಿಐಜಿ ನಿರಾಕರಿಸಿದರು. ಇದರಿಂದ ಕೋಪಗೊಂಡ ನರೇಶ್ ತನ್ನ ಸಹೋದ್ಯೋಗಿ ಒಬ್ಬರ ಕೈಯನ್ನು ಕಚ್ಚಿ, ವಸತಿಗೃಹಕ್ಕೆ ಓಡಿದರು.
ಭಾನುವಾರ ಸಂಜೆ 5.30ಕ್ಕೆ ಬಾಲ್ಕನಿಗೆ ಬಂದ ನರೇಶ್, ರೈಫೆಲ್ ತೋರಿಸಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದರು. ಇದಾದ ಒಂದು ಗಂಟೆಯ ಒಳಗೆ ನರೇಶ್ ಅವರು ಎಂಟು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ನರೇಶ್ ಅವರು ಆತ್ಮಹತ್ಯೆಯ ಬೆದರಿಕೆ ಹಾಕುತ್ತಿರುವ ವಿಷಯ ತಿಳಿದ ಪೊಲೀಸರು ಹಾಗೂ ಸಿಆರ್‌ಪಿಎಫ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಆತ್ಮಹತ್ಯೆ ಮಾಡಿಕೊಳ್ಳದಂತೆ, ರೈಫೆಲ್ ಅನ್ನು ಬಿಸಾಡುವಂತೆ ಮನವಿ ಮಾಡಿದರು.
ನರೇಶ್ ಅವರ ಮನವೊಲಿಸಲು ಅವರ ತಂದೆಯೂ ಪ್ರಯತ್ನಿಸಿದರು; ಇದೂ ಫಲ ನೀಡಲಿಲ್ಲ. 'ನರೇಶ್ ಅವರು ತುಂಬಾ ಕೋಪಗೊಂಡಿದ್ದರು. ಅವರ ಇಚ್ಛೆಯಂತೆ ಡಿಐಜಿ ಅವರೂ ಸ್ಥಳಕ್ಕೆ ಬರಲು ಒಪ್ಪಿಕೊಂಡಿದ್ದರು. ವಸತಿಗೃಹಕ್ಕೆ ಬರುವ ದಾರಿ ಮಧ್ಯೆ ಇದ್ದರು. ಇಷ್ಟಾದರೂ ಅವರು ಸೋಮವಾರ ಬೆಳಿಗ್ಗೆ 11ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡರು. ಆತ್ಮಹತ್ಯೆ ಮಾಡಿಕೊಳ್ಳಲು ಬಳಸಿದ ರೈಫಲ್ ಅನ್ನು ವಶಕ್ಕೆ ಪಡೆಯಲಾಗಿದೆ' ಎಂದು ಡಿಸಿಪಿ (ಪೂರ್ವ) ಅಮೃತ ದುಹಾನ್ ತಿಳಿಸಿದರು.