ಅಹ್ಮದಾಬಾದ್ : ಬಂಧಿತ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇರುವ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಗುಜರಾತ್ ಪೊಲೀಸರು ಮಂಗಳವಾರ ಚಿತ್ರನಿರ್ದೇಶಕ ಅವಿನಾಶ್ ದಾಸ್ ಅವರನ್ನು ಬಂಧಿಸಿದ್ದಾರೆ.
ಅವರನ್ನು ಮುಂದಿನ ಕ್ರಮಕ್ಕೆ ಅಹ್ಮದಾಬಾದ್‌ಗೆ ತರಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
''ನಾವು ದಾಸ್ ಅವರನ್ನು ಮಂಗಳವಾರ ಮುಂಬೈಯಿಂದ ವಶಕ್ಕೆ ತೆಗೆದುಕೊಂಡಿದ್ದೇವೆ. ಮುಂದಿನ ಕಾನೂನು ಪ್ರಕ್ರಿಯೆಗಾಗಿ ನಮ್ಮ ತಂಡ ಅವರನ್ನು ಅಹ್ಮದಾಬಾದ್ ಕರೆ ತರತ್ತಿದ್ದಾರೆ'' ಎಂದು ಸಿಟಿ ಕ್ರೈಮ್ ಬ್ರಾಂಚ್‌ನ ಎಸಿಪಿ ಡಿ.ಪಿ. ಚುಡಾಸಮಾ ಅವರು ಹೇಳಿದ್ದಾರೆ.
ಮಹಿಳೆಯೋರ್ವರು ರಾಷ್ಟ್ರ ಧ್ವಜವನ್ನು ಧರಿಸಿದ ಫೋಟೊವನ್ನು ತನ್ನ ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿ ಅಹ್ಮದಾಬಾದ್ ಕ್ರೈಮ್ ಬ್ರಾಂಚ್ ಅವಿನಾಶ್ ದಾಸ್ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿದೇಶನಾಲಯದಿಂದ ಬಂಧಿತರಾಗಿರುವ ಸಿಂಘಾಲ್ ಅವರು ಶಾ ಅವರಲ್ಲಿ ಏನೋ ಪಿಸುಗುಟ್ಟುತ್ತಿರುವುದನ್ನು ತೋರಿಸುವ ಫೋಟೊವನ್ನು ಶೇರ್ ಮಾಡಿದ ಬಳಿಕ ೪೬ರ ಹರೆಯದ ದಾಸ್ ವಿರುದ್ಧ ಜೂನ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಫೋಟೊದ ಕುರಿತ ಬರಹದಲ್ಲಿ ದಾಸ್ ಅವರು ಈ ಪೋಟೊವನ್ನು ಸಿಂಘಾಲ್ ಬಂಧನವಾಗುವುದಕ್ಕಿಂತ ಕೆಲವು ದಿನಗಳ ಮುನ್ನ ತೆಗೆಯಲಾಗಿದೆ ಎಂದು ಹೇಳಿದ್ದರು. ಆದರೆ, ವಾಸ್ತವವಾಗಿ ಆ ಫೋಟೊವನ್ನು ೨೦೧೭ರಲ್ಲಿ ತೆಗೆಯಲಾಗಿತ್ತು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ.
ಶಾ ಅವರ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ದಾಸ್ ಅವರು ಈ ಫೋಟ್ ಪೋಸ್ಟ್ ಮಾಡಿದ್ದಾರೆ ಎಂದ ಕ್ರೈಮ್ ಬ್ರಾಂಚ್ ಆರೋಪಿಸಿದೆ.