ಮುಂಬೈ: ರಾಷ್ಟ್ರಪತಿ ಚುನಾವಣೆಯಲ್ಲಿ ಯಾರನ್ನ ಬೆಂಬಲಿಸಬೇಕೆಂಬ ವಿಚಾರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ತನ್ನ ಸಂಸದರ ಬೇಡಿಕೆಗೆ ಮಣಿದಿದೆ. ಜುಲೈ 18ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಶಿವಸೇನೆ ಬೆಂಬಲಿಸುತ್ತದೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ 22 ಸಂಸದರಲ್ಲಿ 16 ಮಂದಿ ಉದ್ಧವ್ ಠಾಕ್ರೆ ಅವರೊಂದಿಗಿನ ಸಭೆಯಲ್ಲಿ ಭಾಗವಹಿಸಿದ ಒಂದು ದಿನದ ನಂತರ ದ್ರೌಪತಿ ಮುರ್ಮು ಅವರನ್ನು ಬೆಂಬಲಿಸುವ ನಿರ್ಧಾರವು ಹೊರಬಿದ್ದಿದೆ. ಸಭೆಯಲ್ಲಿ ಬಹುತೇಕರು ಮುರ್ಮು ಬುಡಕಟ್ಟು ಸಮುದಾಯದ ಮಹಿಳೆಯಾಗಿರುವುದರಿಂದ ಅವರಿಗೆ ಮತ ಹಾಕಬೇಕೆಂದು ಹೇಳಿದ್ದಾರೆ. ಹೀಗಾಗಿ ದ್ರೌಪತಿ ಮುರ್ಮುರನ್ನು ಬೆಂಬಲಿಸುತ್ತಿದ್ದೇವೆ. ಹಾಗೆಂದ ಮಾತ್ರಕ್ಕೆ ನಮ್ಮ ಬೆಂಬಲ ಬಿಜೆಪಿಗಿದೆ ಎಂದೆಲ್ಲ ಎಂದು ಸಂಸದ ಸಂಜತ್ ರಾವತ್ ಹೇಳಿದ್ದಾರೆ.
ಮಹಾರಾಷ್ಟ್ರದ ಜನಸಂಖ್ಯೆಯ ಸುಮಾರು 10 ಪ್ರತಿಶತದಷ್ಟು ಜನರು ಪರಿಶಿಷ್ಟ ಪಂಗಡದವರು ಎಂಬುದನ್ನ ಇಲ್ಲಿ ಗಮನಿಸಬಹುದು. ಈಗಾಗಲೇ ಎನ್‌ಡಿಎಗೆ ಸಂಖ್ಯಾಬಲವಿರುವುದರಿಂದ ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಅವರು ಭಾರತದ ರಾಷ್ಟ್ರಪತಿಯಾದ ಮೊದಲ ಬುಡಕಟ್ಟು ಮಹಿಳೆಯಾಗುತ್ತಾರೆ.
ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ಜಂಟಿ ಅಭ್ಯರ್ಥಿ ಎಂದು ಪ್ರತಿಪಕ್ಷವು ಘೋಷಿಸಿದೆ. ಆದರೂ ಹಲವಾರು ಎನ್‌ಡಿಎಯೇತರ ಪಕ್ಷಗಳು ದ್ರೌಪತಿ ಮುರ್ಮು ಅವರ ಬುಡಕಟ್ಟು ಗುರುತನ್ನು ಉಲ್ಲೇಖಿಸಿ ಅವರನ್ನು ಬೆಂಬಲಿಸಲು ಆಯ್ಕೆ ಮಾಡಿಕೊಂಡಿವೆ.