ನವದೆಹಲಿ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಅವರನ್ನು ಭಾನುವಾರ ಭೇಟಿ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಭಿನಂದಿಸಿದ್ದಾರೆ.
ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆಯಾದ ಧನಕರ್ ಅವರಿಗೆ ಅಭಿನಂದನೆಗಳು. ರೈತ ಕುಟುಂಬದಲ್ಲಿ ಜನಿಸಿದ ಧನಕರ್ ಅವರು ತಮ್ಮ ಜೀವನವನ್ನು ಜನರ ಕಲ್ಯಾಣ ಹಾಗೂ ಸಮಾಜದ ಉನ್ನತಿಗಾಗಿ ಮುಡಿಪಾಗಿಟ್ಟಿದ್ದರು ಎಂದು ಅಮಿತ್ ಶಾ ಪ್ರತಿಪಾದಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಶನಿವಾರ ಎನ್‌ಡಿಎ ಅಭ್ಯರ್ಥಿಯನ್ನು ಪ್ರಕಟಿಸಿದ್ದರು. ಧನಕರ್ ಅವರು 2019 ಜುಲೈನಲ್ಲಿ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಅಧಿಕಾರ ವಹಿಸಿದ್ದರು.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಲು ಜುಲೈ 19 ಕೊನೆಯ ದಿನವಾಗಿದ್ದು, ಆಗಸ್ಟ್ 6ರಂದು ಚುನಾವಣೆ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಸಹ, ಧನಕರ್ ಅವರನ್ನು ಅಭಿನಂದಿಸಿದ್ದು, 'ರೈತನ ಮಗ' ಎಂದು ಸಂಭೋದಿಸಿದ್ದಾರೆ.
ಉಪರಾಷ್ಟ್ರಪತಿಯಾಗಿ ಧನಕರ್ ಆಯ್ಕೆಯಾಗುವುದು ಬಹುತೇಕ ಖಚಿತಗೊಂಡಿದೆ. ಲೋಕಸಭೆ ಹಾಗೂ ರಾಜ್ಯಸಭೆಯನ್ನು ಒಳಗೊಂಡಿರುವ ಸಂಸತ್ತಿನಲ್ಲಿ ಬಿಜೆಪಿ ಬಹುಮತ ಹೊಂದಿದೆ. ಸಂಸತ್ತಿನಲ್ಲಿ ಪ್ರಸ್ತುತ 780 ಸಂಖ್ಯಾಬಲದ ಪೈಕಿ ಬಹುಮತಕ್ಕೆ 390 ಮತಗಳು ಬೇಕಾಗಿದ್ದು, ಬಿಜೆಪಿ 394 ಸಂಸದರನ್ನು ಹೊಂದಿದೆ.