ನವದೆಹಲಿ: ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು ತಮ್ಮ ಆಕ್ಷೇಪಾರ್ಹ ಹೇಳಿಕೆ ಬಗ್ಗೆ ಕ್ಷಮೆಯಾಚಿಸಿದ್ದಾರೆ.
ಈ ಸಂಬಂಧ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಅಧೀರ್ ರಂಜನ್ ಚೌಧರಿ ಅವರು ತಾವು ತಪ್ಪಾಗಿ ರಾಷ್ಟ್ರಪತ್ನಿ ಪದ ಬಳಸಿದ್ದು, ಬಾಯಿ ತಪ್ಪಿನಿಂದಾಗಿದೆ ಎಂದು ಹೇಳಿದ್ದಾರೆ.
ನೀವು ಹೊಂದಿರುವ ಸ್ಥಾನವನ್ನು ವಿವರಿಸಲು ತಪ್ಪು ಪದವನ್ನು ಬಳಸಿದ್ದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸಲು ಈ ಪತ್ರ ಬರೆಯುತ್ತಿದ್ದೇನೆ. ಇದು ಬಾಯಿ ತಪ್ಪಿನಿಂದಾಗಿದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಾನು ಕ್ಷಮೆಯಾಚಿಸುತ್ತೇನೆ ಮತ್ತು ಅದನ್ನು ಸ್ವೀಕರಿಸಲು ವಿನಂತಿಸುತ್ತೇನೆ" ಎಂದು ಚೌಧರಿ ಅವರು ತಮ್ಮ ಪತ್ರದಲ್ಲಿ ರಾಷ್ಟ್ರಪತಿಗಳಿಗೆ ಹೇಳಿದ್ದಾರೆ.
ಕಳೆದ ಬುಧವಾರ ವಿಜಯ್ ಚೌಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚೌಧರಿ, ರಾಷ್ಟ್ರಪತಿ ಮುರ್ಮು ಅವರಿಗೆ 'ರಾಷ್ಟ್ರಪತ್ನಿ' ಪದವನ್ನು ಬಳಸಿದ್ದರು, ಇದು ಆಡಳಿತಾರೂಢ ಬಿಜೆಪಿ ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸಿ, ಚೌಧರಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿತ್ತು.