ರಾಯಪುರ: 'ಸಂವಿಧಾನದಲ್ಲಿ ನೀಡಿರುವ ಹಕ್ಕುಗಳ ಕುರಿತು ನಾಗರಿಕರು ಜಾಗೃತರಾದಾಗ ಮಾತ್ರ ಸಂವಿಧಾನತ್ಮಕ ಗಣರಾಜ್ಯದ ಅಭಿವೃದ್ಧಿ ಸಾಧ್ಯ' ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಭಾನುವಾರ ಅಭಿಪ್ರಾಯಪಟ್ಟರು.
ಪ್ರತಿಯೊಬ್ಬ ನಾಗರಿಕನಿಗೂ ತನ್ನ ಕರ್ತವ್ಯ ಮತ್ತು ಹಕ್ಕುಗಳ ಕುರಿತು ಅರಿವು ಇರಬೇಕು. ಸರಳವಾಗಿ ಇವುಗಳನ್ನು ಜನರಿಗೆ ಮನನ ಮಾಡಿಕೊಡಬೇಕಾದ ಹೊಣೆಗಾರಿಕೆ ಕಾನೂನು ಪದವೀಧರರದ್ದಾಗಿದೆ ಎಂದು ಹೇಳಿದರು.
ಇಲ್ಲಿನ, ಹಿದಾಯತ್‌ಉಲ್ಲಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ (ಎನ್‌ಎನ್‌ಎಲ್‌ಯು) 5ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಸಾಮಾಜಿಕ ಬದಲಾವಣೆ ತರಲು ಕಾನೂನು ಕೂಡಾ ಒಂದು ಅಸ್ತ್ರ. ಕಾನೂನು ಪದವೀಧರರನ್ನು ಸಾಮಾಜಿಕ ಕಾರ್ಯಕರ್ತರಾಗಿಯೂ ರೂಪಿಸುವಂತೆ ಕಾನೂನು ಶಿಕ್ಷಣ ಇರಬೇಕು ಎಂದರು.
ತಾಪಮಾನ ಬಿಕ್ಕಟ್ಟು ಅಥವಾ ಮಾನವಹಕ್ಕುಗಳ ಉಲ್ಲಂಘನೆಯೇ ಇರಲಿ. ವಿಶ್ವದಾದ್ಯಂತ ಒಂದು ಸಂಘಟಿತ ಶಕ್ತಿಗಳು ಕಾರ್ಯ ನಿರ್ವಹಿಸುತ್ತಿವೆ. ವಾಸ್ತವವಾಗಿ ತಂತ್ರಜ್ಞಾನದ ಕ್ರಾಂತಿಯು ಪ್ರತಿಯೊಬ್ಬರನ್ನು ವಿಶ್ವದ ನಾಗರಿಕರನ್ನಾಗಿ ರೂಪಿಸಿದೆ. ಎಲ್ಲರೂ ಈ ಕ್ರಾಂತಿಯ ಭಾಗವಾಗಬೇಕಾಗಿದೆ ಎಂದು ಹೇಳಿದರು.
ಸಂವಿಧಾನದ ಪರಿಮಿತಿಯಲ್ಲಿಯೇ ಸಾಮಾಜಿಕ ಬದಲಾವಣೆ ತರುವಲ್ಲಿ ಯುವಜನರ ಪಾತ್ರ ಕುರಿತು ಒತ್ತಿ ಹೇಳಿದ ಅವರು, ಆಧುನಿಕ ಭಾರತದ ಸ್ವರೂಪ ವಿವರಿಸುವ ಸಂವಿಧಾನವು ಕೇವಲ ಕಾನೂನು ವಿದ್ಯಾರ್ಥಿಗಳು, ವಕೀಲರು ಮತ್ತು ಜನಸಂಖ್ಯೆಯ ಸೀಮಿತ ವರ್ಗಕ್ಕೆ ಮಾತ್ರವೇ ಸೇರಿದಂತಾಗಿದೆ ಎಂದು ವಿಷಾದಿಸಿದರು.
ಸಂವಿಧಾನ ಎಂಬುದು ಪ್ರತಿಯೊಬ್ಬರಿಗೂ ಇರುವಂತಹದ್ದು. ಪ್ರತಿಯೊಬ್ಬರಿಗೂ ಇದರ ಅರಿವು ಇರಬೇಕು. ಸಂವಿಧಾನದ ಸಂಸ್ಕೃತಿ ಬೆಳೆಸುವ ಮತ್ತು ಜಾಗೃತಿ ಮೂಡಿಸುವುದು ಒಂದು ಸಂಘಟನಾತ್ಮಕ ಹೊಣೆಗಾರಿಕೆಯಾಗಿದೆ ಎಂದು ಮುಖ್ಯನ್ಯಾಯಮೂರ್ತಿ ಪ್ರತಿಪಾದಿಸಿದರು.