ಕುಂಬಳೆ: ಪುತ್ತಿಗೆ ಎಸ್‍ಕೆಎಸ್ ಕಲಾ ಮತ್ತು ಕ್ರೀಡಾ ಕ್ಲಬ್ಬಿನ 50ನೇ ವರ್ಷಾಚರಣೆಯ ಸಂಭ್ರಮದ ಅಂಗವಾಗಿ 50 ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ಬಿನ ಸುವರ್ಣಮಹೋತ್ಸವ ಸಮಿತಿ ಅಧ್ಯಕ್ಷ ಡಿ. ದಾಮೋದರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜುಲೈ 10ರಂದು ಬೆಳಗ್ಗೆ 10ಕ್ಕೆ ಸುವರ್ಣಮಹೋತ್ಸವ ಸಮಾರಂಭದ ವರ್ಷಪೂರ್ತಿ ಕಾರ್ಯಕ್ರಮವನ್ನು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಈ ಸಂದರ್ಬ ಆಯೋಜಿಸಿರುವ ಗ್ರಾಮೋತ್ಸವವನ್ನು ಕುಂಬಳೆ ಪೊಲೀಸ್ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಪ್ರಮೋದ್ ಉದ್ಘಾಟಿಸುವರು. ಗ್ರಾಮೋತ್ಸವ ಅಂಗವಾಗಿ ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರಿಗಾಗಿ ಪುತ್ತಿಗೆ ಸಂತೆ ಗದ್ದೆಯಲ್ಲಿ ಕೆಸರುಗದ್ದೆ ಓಟ, ಕೆಸರಿನಲ್ಲಿ ಕಬಡ್ಡಿ, ಗೋಣಿಚೀಲ ಓಟ ಸೇರಿದಂತೆ ಗ್ರಾಮೀಣ ಕ್ರೀಡೆಗಳು ನಡೆಯಲಿದೆ.
ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸುವರು. ಪುತ್ತಿಗೆ ಗ್ರಾಪಂ ಪಂಚಾಯಿತಿ ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ನಾಯ್ಕ, ಬ್ಲಾಕ್ ಪಂಚಾಯಿತಿ ಸದಸ್ಯೆ ಚಂದ್ರಾವತಿ ಕೆಮ್ಮಣ್ಣು, ಗ್ರಾಪಂ ಸದಸ್ಯ ಕೇಶವ ಪಾಲ್ಗೊಳ್ಳುವರು. ಪುತ್ತಿಗೆ ಪಂಚಾಯಿತಿಯಲ್ಲಿ 1973ರಲ್ಲಿ ಆರಂಭಗೊಂಡ ಸಂಘಟನೆ ಹಲವಾರು ಸಾಮಾಜಿಕ, ಸಾಂಸ್ಕøತಿಕ, ಶೈಕ್ಷಣಿಕ ಮತ್ತು ಕಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕ್ಲಬ್ಬಿನ ಪ್ರಧಾನ ಕಾರ್ಯದರ್ಶಿ ಗಿರೀಶ್, ಬಾಲಕೃಷ್ಣ ಪುತ್ತಿಗೆ, ಶಿವಪ್ರಸಾದ್ ರೈ, ದೇವದಾಸ್ ಆಚಾರ್ಯ ಉಪಸ್ಥಿತರಿದ್ದರು.