ಹಾಪುರ್: ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮೇಘಾಲಯ ಬಿಜೆಪಿಯ ಉಪಾಧ್ಯಕ್ಷ ಬರ್ನಾಡ್ ಎನ್ ಮರಕ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಮೇಘಾಲಯದ ತುರಾದಲ್ಲಿರುವ ತನ್ನ ಫಾರ್ಮ್‌ಹೌಸ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಅವರ ಮೇಲೆ ಪ್ರಕರಣ ದಾಖಲಿಸಿದ್ದರು. ಬಳಿಕ ನಾಪತ್ತೆಯಾಗಿದ್ದ ಮರಕ್ ರನ್ನು ಇಂದು ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಶನಿವಾರ ನಡೆದ ದಾಳಿಯ ವೇಳೆ ಆರು ಅಪ್ರಾಪ್ತರನ್ನು ರಕ್ಷಿಸಿ, 73 ಜನರನ್ನು ಅವರ ಫಾರ್ಮ್‌ಹೌಸ್ ‘ರಿಂಪು ಬಾಗನ್’ ನಿಂದ ಬಂಧಿಸಿದ ನಂತರ ಮಾರಕ್ ಪರಾರಿಯಾಗಿದ್ದರು. ತನಿಖೆಯಲ್ಲಿ ಸಹಕರಿಸುವಂತೆ ಮಾರಾಕ್ ಅವರನ್ನು ಕೇಳಲಾಗಿತ್ತು. ಆದರೆ ತನಿಖಾಧಿಕಾರಿಗಳಿಂದ ತಪ್ಪಿಸಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೇಘಾಲಯ ಪೊಲೀಸರು ಬಿಜೆಪಿ ನಾಯಕನಿಗೆ ಲುಕ್‌ಔಟ್ ನೋಟಿಸ್ ನೀಡಿದ ಕೆಲವೇ ಗಂಟೆಗಳ ನಂತರ ಬಂಧನವಾಗಿದೆ. ನಿನ್ನೆ ತುರಾ ನ್ಯಾಯಾಲಯವು ಬಿಜೆಪಿ ನಾಯಕನ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.
ತುರಾದಲ್ಲಿನ ಮಾರಕ್ ಒಡೆತನದ ರೆಸಾರ್ಟ್‌ನಲ್ಲಿ ಬಂಧನದಲ್ಲಿದ್ದ ಐವರು ಮಕ್ಕಳನ್ನು ಶನಿವಾರ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೇಶ್ಯಾಗೃಹ ನಡೆಸ್ತಿದ್ದ ಆ ಸ್ಥಳದಿಂದ ದಾಳಿಯ ವೇಳೆ 47 ಯುವಕರು ಮತ್ತು 26 ಮಹಿಳೆಯರನ್ನು ಬಂಧಿಸಲಾಗಿದೆ. ದಾಳಿಯ ವೇಳೆ ಅಪಾರ ಪ್ರಮಾಣದ ಮದ್ಯ, ಸುಮಾರು 500 ಗರ್ಭನಿರೋಧಕ ಪ್ಯಾಕೆಟ್‌ಗಳು, ಸೆಲ್‌ಫೋನ್‌ಗಳು ಮತ್ತು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಎಲ್‌ಆರ್ ಬಿಷ್ಣೋಯ್ ಹೇಳಿದ್ದಾರೆ.