ಬೆಂಗಳೂರು: ಅಮೆರಿಕದ ಗ್ಲೋಬಲ್ ಡೌನ್ ಸಿಂಡ್ರೋಮ್ ಫೌಂಡೇಶನ್ ಪ್ರತಿವರ್ಷವೂ ಫ್ಯಾಷನ್ ಷೋ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. 'ಫ್ಯಾಶನ್ ಷೋ - ಬಿ ಬ್ಯೂಟಿಫುಲ್, ಬಿ ಯುವರ್‌ಸೆಲ್ಫ್' ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಈ ವರ್ಷದ ಫ್ಯಾಷನ್ ಷೋ ಅಮೆರಿಕದ ಡೆನ್ವರ್ನ್ನಲ್ಲಿ ಬರುವ ನವೆಂಬರ್ 12ರಂದು ನಡೆಯಲಿದೆ.
ಈ ಷೋಗೆ ಇದೇ ಮೊದಲ ಬಾರಿಗೆ ಬೆಂಗಳೂರಿನ 23 ವರ್ಷದ ಯುವತಿ ಆಯ್ಕೆಯಾಗಿದ್ದಾರೆ. ಡೌನ್ ಸಿಂಡ್ರೋಮ್ ಹೊಂದಿರುವ 20ಕ್ಕೂ ಹೆಚ್ಚು ಮಾಡೆಲ್ ಗಳು ಈ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದು, ಬೆಂಗಳೂರಿನ ರಿಜಾ ರೆಜಿ ಆಯ್ಕೆಯಾಗಿದ್ದಾರೆ.
ಫೆಬ್ರವರಿಯಲ್ಲಿ ಆನ್‌ಲೈನ್ ಆಡಿಷನ್‌ನಲ್ಲಿ ರಿಜಾ ಆಯ್ಕೆಯಾದರು. ಆಕೆಯ ವೇಷಭೂಷಣಗಳು (ಅವರು ಇಂಡೋ-ವೆಸ್ಟರ್ನ್ ಫ್ಯೂಷನ್ ಲುಕ್ ಅನ್ನು ಆಯ್ಕೆ ಮಾಡಿಕೊಂಡಿದ್ದರು), ಆಕೆಯ ವ್ಯಕ್ತಿತ್ವದ ಕುರಿತು ಪ್ರಶ್ನೋತ್ತರ ಅವಧಿ ಮತ್ತು ಸಣ್ಣ ರ‍್ಯಾಂಪ್ ವಾಕ್ ಆಧಾರದ ಮೇಲೆ ರಿಜಾ ಅವರ ಆಯ್ಕೆಯಾಗಿದೆ.
ಕಲೆಯಲ್ಲಿ ಅಪಾರ ಆಸಕ್ತಿಯುಳ್ಳ ರಿಜಾ ರೆಜಿ ಬೆಂಗಳೂರಿನ ಕ್ರಿಸಾಲಿಸ್ ಪರ್ಫಾರ್ಮೆನ್ಸ್ ಆರ್ಟ್ ಸೆಂಟರ್‌ನಲ್ಲಿ ರಂಗಭೂಮಿ ಅಧ್ಯಯನ ಮಾಡುತ್ತಿದ್ದಾರೆ. ಡಯಾನಾ ತೊಳುರ್ ಅವರ ಬಳಿ ರಂಗಭೂಮಿ ತರಬೇತಿ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ನೃತ್ಯಗಾರ್ತಿ ಸಹ ಆಗಿದ್ದಾರೆ.
ಫ್ಯಾಷನ್ ಷೋಗೆ ಆಯ್ಕೆಯಾಗಿ ಇತಿಹಾಸ ಬರೆದಿರುವ ರಿಜಾ ರೆಜಿ ಈ ಖುಷಿಯ ಸುದ್ದಿಯನ್ನು ಮಾಧ್ಯಮದವರ ಜತೆ ಹಂಚಿಕೊಂಡಿದ್ದಾರೆ. 'ಈ ಫ್ಯಾಷನ್ ಈವೆಂಟ್ಗೆ ಭಾರತದಿಂದ ಆಯ್ಕೆಯಾದ ಏಕೈಕ ಸ್ಪರ್ಧಿ ಎಂದು ತಿಳಿದು ನನಗೆ ಆಶ್ಚರ್ಯವಾಗಿದೆ. ಅದರ ಜೊತೆ ಸ್ಪರ್ಧೆಯಲ್ಲಿ ಭಾಗವಹಿಸಲು ತುಂಬಾ ಉತ್ಸುಕಳಾಗಿದ್ದೇನೆ. ರಂಗಭೂಮಿ ನನ್ನ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಇದು ನನ್ನ ಆಲೋಚನೆಗಳು ಮತ್ತು ಭಾವನೆಗಳನ್ನು ತೆರೆಯಲು ಮತ್ತು ವ್ಯಕ್ತಪಡಿಸಲು ನನಗೆ ಸಹಾಯ ಮಾಡಿತು ಎಂದಿದ್ದಾರೆ.
ರಿಜಾ ಭಾವುಜ ಜೀವಿಯಾಗಿದ್ದು, ಹೆಚ್ಚು ಜನರ ಜೊತೆ ಬೆರೆಯಲು ಇಷ್ಟಪಡುತ್ತಾಳೆ. ತನ್ನ ಅಂಗವೈಕಲ್ಯದಿಂದ ಲಾಭ ಹುಡುಕುವ ಹುಡುಗಿ ಅವಳಲ್ಲ ಎನ್ನುತ್ತಾರೆ ರಿಜಾ ತಾಯಿ ಅನಿತಾ. ವಿಕಲಚೇತನರನ್ನು ಸಬಲೀಕರಣಗೊಳಿಸುವ ಬೆಂಗಳೂರು ಮೂಲದ ಫೌಂಡೇಶನ್ ಬ್ಯೂಟಿಫುಲ್ ಟುಗೆದರ್‌ನ ಸಹ-ಸಂಸ್ಥಾಪಕಿಯಾಗಿದ್ದಾರೆ ಇವರು. ಮಗಳು ರಿಜಾ ಮಾತಿನಲ್ಲಿ ಚತುರರಾಗಿದ್ದು, ತಮ್ಮ ಎಲ್ಲಾ ಭಾವನೆಗಳನ್ನು ತುಂಬಾ ಚೆನ್ನಾಗಿ ವ್ಯಕ್ತಪಡಿಸುತ್ತಾರೆ.