ವಾಷಿಂಗ್ಟನ್: ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾ ಇದೇ ಮೊದಲ ಬಾರಿಗೆ ಬಹುಚರ್ಚಿತ 'ಹಾರುವ ತಟ್ಟೆ (ಯುಎಫ್‌ಒ) ಅಥವಾ ವೈಮಾನಿಕ ರಹಸ್ಯ ವಿದ್ಯಮಾನ(ಯುಎಪಿ)ಗಳ'ಗಳ ಅಧ್ಯಯನಕ್ಕೆ ಮುಂದಡಿ ಇಟ್ಟಿದೆ.
ಈ ವಿಷಯದ ಬಗ್ಗೆ ಸಾರ್ವಜನಿಕವಾಗಿ ಎಷ್ಟು ಮಾಹಿತಿ ಲಭ್ಯವಿದೆ, ನಿಗೂಢ ವಸ್ತುಗಳು, ಹಾರುವ ತಟ್ಟೆಗಳನ್ನು ಅರ್ಥಮಾಡಿಕೊಳ್ಳುವುದು ಎಷ್ಟು ಅಗತ್ಯ ಎಂಬುದರ ಅಧ್ಯಯನಕ್ಕಾಗಿ ಸ್ವತಂತ್ರ ತಂಡವನ್ನು ರಚಿಸಲಾಗುತ್ತಿದೆ ಎಂದು ಬಾಹ್ಯಾಕಾಶ ಸಂಸ್ಥೆ ಗುರುವಾರ ಪ್ರಕಟಿಸಿದೆ.
'ವಿವಾದಾತ್ಮಕ ವಿಚಾರವೊಂದರ ಅಧ್ಯಯನಕ್ಕೆ ಮುಂದಾಗಿರುವ ನಾಸಾ ಬಗ್ಗೆ ಸಾಂಪ್ರದಾಯಿಕ ವಿಜ್ಞಾನ ಸಮುದಾಯವು ವಿಚಿತ್ರವಾಗಿ ನೋಡಬಹುದು. ಆದರೆ, ನಾನು ಅದನ್ನು ಒಪ್ಪಲಾರೆ' ಎಂದು ನಾಸಾದ 'ಸೈನ್ಸ್ ಮಿಷನ್'ನ ಮುಖ್ಯಸ್ಥ ಥಾಮಸ್ ಜುರ್ಬುಚೆನ್ ಹೇಳಿದ್ದಾರೆ.
'ನಮಗೆ ಬರಬಹುದಾದ ಅಪಖ್ಯಾತಿಯ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ' ಎಂದು ಜುರ್ಬುಚೆನ್ ಅವರು 'ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ವೆಬ್‌ಕಾಸ್ಟ್'ನಲ್ಲಿ ಸ್ಪಷ್ಟಪಡಿಸಿದ್ದಾರೆ. 'ಮಾಹಿತಿ, ದತ್ತಾಂಶಗಳೇ ಇಲ್ಲದ ಕ್ಷೇತ್ರವಿದು. ಹೀಗಾಗಿ ಈ ಕಾರ್ಯ ದೊಡ್ಡ ಸವಾಲು ಎಂಬುದು ನಮ್ಮ ಅನಿಸಿಕೆಯಾಗಿದೆ' ಎಂದು ಅವರು ತಿಳಿಸಿದ್ದಾರೆ.
ವೈಮಾನಿಕ ರಹಸ್ಯ ವಿದ್ಯಮಾನಗಳು ಎಂದು ಕರೆಯಲ್ಪಡುವ ಆಗಸದಲ್ಲಿನ ನಿಗೂಢ ಗೋಚರಗಳನ್ನು ವಿವರಿಸುವಲ್ಲಿ ನಾಸಾದ ಮೊದಲ ಹೆಜ್ಜೆ ಇದು ಎಂದು ಪರಿಗಣಿಸಲಾಗಿದೆ.
ಅಧ್ಯಯನವು ಶೀಘ್ರವೇ ಆರಂಭವಾಗಲಿದ್ದು, 9 ತಿಂಗಳ ಕಾಲ ನಡೆಯಲಿದೆ. ಇದಕ್ಕಾಗಿ ಒಂದು ಲಕ್ಷ ಡಾಲರ್ (₹77 ಲಕ್ಷ) ಹಣ ಮೀಸಲಿಡಲಾಗುತ್ತಿದೆ. ಈ ಅಧ್ಯಯನದಲ್ಲಿ ಮಿಲಿಟರಿಯ ವರ್ಗೀಕೃತ ಮಾಹಿತಿಯನ್ನು ಪರಿಗಣಿಸುತ್ತಿಲ್ಲ. ಅಲ್ಲದೇ, ಈ ಅಧ್ಯಯನ ಮುಕ್ತವಾಗಿರಲಿದೆ ಎಂದು ನಾಸಾ ಹೇಳಿದೆ.
'ಸೈಮನ್ಸ್ ಫೌಂಡೇಶನ್'ನ ಅಧ್ಯಕ್ಷ, ಖಗೋಳ ಭೌತಶಾಸ್ತ್ರಜ್ಞ ಡೇವಿಡ್ ಸ್ಪೆರ್ಗೆಲ್ ಅವರನ್ನು ತಂಡದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ವೈಮಾನಿಕ ರಹಸ್ಯ ವಿದ್ಯಮಾನಗಳಲ್ಲಿ ಏನೋ ಮಾಹಿತಿ ಇರಬಹುದು ಎಂಬ ಒಂದೇ ಕಲ್ಪನೆಯ ಆಧಾರದ ಮೇಲೆ ನಾವು ಈ ಸಂಶೋಧನೆ ಕೈಗೊಂಡಿದ್ದೇವೆ ಎಂದು ಸ್ಪೆರ್ಗೆಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.