ನವದೆಹಲಿ :ಭಾರತೀಯ ವಾಯುಪಡೆಯ ಅಧಿಕಾರಿಯೋರ್ವರು ತನ್ನ ಫೈಟರ್ ಪೈಲಟ್ ಪುತ್ರಿಯೊಂದಿಗೆ ಹಾಕ್-132 ಯುದ್ಧವಿಮಾನದ ಮುಂದೆ ನಿಂತಿರುವ ಚಿತ್ರವೊಂದು ಅಂತರ್ಜಾಲದಲ್ಲಿ ಭಾರೀ ವೈರಲ್ ಆಗಿದೆ. ಏರ್ ಕಮೋಡರ್ ಸಂಜಯ್ ಶರ್ಮಾ ಮತ್ತು ಅವರ ಪುತ್ರಿ ಫ್ಲೈಯಿಂಗ್ ಆಫೀಸರ್ ಅನನ್ಯಾ ಶರ್ಮಾ ಅವರು ಮೇ 30ರಂದು ಕರ್ನಾಟಕದ ಬೀದರ್ ವಾಯುನೆಲೆಯಲ್ಲಿ ನಡೆದಿದ್ದ ಯುದ್ಧವಿಮಾನ ಫಾರ್ಮೇಶನ್ನ ಭಾಗವಾಗಿ ಹಾಕ್-132 ಹಾರಾಟ ನಡೆಸಿದ್ದರು.
ಒಂದೇ ಫಾರ್ಮೇಷನ್ನಲ್ಲಿ ಜೊತೆಯಾಗಿ ಹಾರಾಟ ನಡೆಸುವ ಮೂಲಕ ತಂದೆ ಮತ್ತು ಮಗಳು ಇತಿಹಾಸವನ್ನು ಸೃಷ್ಟಿಸಿದ್ದಾರೆ ಎಂದು ಭಾರತೀಯ ವಾಯುಪಡೆ (ಐಎಎಫ್)ಯು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.
ತಂದೆ ಮತ್ತು ಮಗಳು ಒಂದೇ ಫೈಟರ್ ಫಾರ್ಮೇಷನ್ನ ಭಾಗವಾಗಿದ್ದ ಹಿಂದಿನ ಯಾವುದೇ ನಿದರ್ಶನ ವಾಯುಪಡೆಯಲ್ಲಿಲ್ಲ. ಈ ಅಭಿಯಾನದಲ್ಲಿ ಸಂಜಯ್ ಶರ್ಮಾ ಮತ್ತು ಅನನ್ಯಾ ಶರ್ಮಾ ಅವರು ಕೇವಲ ತಂದೆ-ಮಗಳಿಗಿಂತ ಹೆಚ್ಚಾಗಿದ್ದರು. ಅವರು ಕಾಮ್ರೇಡ್ಗಳಾಗಿದ್ದರು ಮತ್ತು ಸಹೋದ್ಯೋಗಿ ವಿಂಗಮನ್ನಂತೆ ಪರಸ್ಪರರಲ್ಲಿ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದರು ಎಂದು ಐಎಎಫ್ ತಿಳಿಸಿದೆ. ಅನನ್ಯಾ ಐಎಎಫ್ನ ಹೆಚ್ಚು ವೇಗದ ಮತ್ತು ಹೆಚ್ಚು ಶಕ್ತಿಶಾಲಿ ಯುದ್ಧವಿಮಾನವನ್ನು ಹಾರಿಸುವ ಮುನ್ನ ಬೀದರ್ನಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.
ಶರ್ಮಾ 1989ರಲ್ಲಿ ಯುದ್ಧವಿಮಾನದ ಪೈಲಟ್ ಆಗಿ ಕರ್ತವ್ಯಕ್ಕೆ ನಿಯೋಜಿತಗೊಂಡಿದ್ದರು. ಯುದ್ಧವಿಮಾನಗಳ ಕಾರ್ಯಾಚರಣೆಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿರುವ ಅವರು ಮಿಗ್-21 ಸ್ಕ್ವಾಡ್ರನ್ ರ ಮತ್ತು ಮುಂಚೂಣಿ ಯುದ್ಧವಿಮಾನ ನೆಲೆಯ ನೇತೃತ್ವವನ್ನೂ ವಹಿಸಿದ್ದರು. ಅನನ್ಯಾ 2021,ಡಿಸೆಂಬರ್ನಲ್ಲಿ ಫೈಟರ್ ಪೈಲಟ್ ಆಗಿ ಐಎಎಫ್ಗೆ ಸೇರಿದ್ದರು. ಅವರು ಇಲೆಕ್ಟ್ರಾನಿಕ್ಸ್ ಆಯಂಡ್ ಕಮ್ಯುನಿಕೇಷನ್ನಲ್ಲಿ ಬಿ.ಇ.ಪದವಿಯನ್ನು ಪಡೆದಿದ್ದಾರೆ.