ಕಸಿನ್ಸ್... ಈಗ ಸಾಮಾನ್ಯವಾಗಿ ರೂಡಿಯಲ್ಲಿರುವ ಪದ. ಕಸಿನ್ ಗಳು ಅಂದರೆ ಪ್ರಾಣಕ್ಕಿಂತ ದೊಡ್ಡ ಸ್ನೇಹಿತರು, ಸ್ವಂತ ಸಹೋದರಿಗಿಂತ ಹೆಚ್ಚಿನ ಬಾಂಡಿಂಗ್ ಹೊಂದಿರುವವರು. ಕೆಲವು ಕಸಿನ್ಸ್ ಗಳು ಎಷ್ಟು ಕ್ಲೋಸ್ ಆಗಿರುತ್ತಾರೆ ಎಂದರೆ ವಿವಿಧ ಕಾರ್ಯಕ್ರಮಗಳಲ್ಲಿ ಒಂದೇ ರೀತಿಯ ಬಟ್ಟೆ, ಒಟ್ಟಿಗೆ ಸಿನಿಮಾಗೆ ಹೋಗೋದು, ಒಟ್ಟಿಗೆ ಶಾಂಪಿಂಗ್ ಮಾಡೋದು, ಒಟ್ಟಿಗೆ ಟ್ರಿಪ್ ಮಾಡೋದು ಇರುತ್ತೆ.
ಒಡಹುಟ್ಟಿದವರಲ್ಲೂ ಇಂತಹ ಬಾಂಧವ್ಯ ಸಾಮಾನ್ಯವಾಗಿ ಇರೋದಿಲ್ಲ. ಆದರೆ ಕಸಿನ್ ಗಳ ನಡುವೆ ಅದೇನೋ ಯಾರಿಗೂ ತಿಳಿಯದ ಪ್ರೀತಿ, ಅನ್ಯೋನ್ಯತೆ ಇರುತ್ತದೆ. ನಿಮಗೆ ಕಸಿನ್ಸ್ ಇದ್ದರೆ ನಿಜಕ್ಕೂ ನೀವು ಲಕ್ಕಿ. ಯಾಕೆಂದರೆ ಕಸಿನ್ ಗಳು ಇದ್ದರೆ ನಿಮ್ಮನ್ನು ಪ್ರೀತಿಸುವ, ಕೇರ್ ಮಾಡುವ ಜನರು ಇದ್ದಾರೆ ಎಂದರ್ಥ. ಹೀಗೆ ಪ್ರೀತಿ,ಅನ್ಯೂನ್ಯ್ತತೆಗೆ ಸಾಕ್ಷಿಯಾಗಿರುವ ಕಸಿನ್ ಗಳು ದಿನವಿದೆ.
ಹೌದು, ನ್ಯಾಷನಲ್ ಕಸಿನ್ಸ್ ಡೇ ಅಂದರೆ ರಾಷ್ಟ್ರೀಯ ಸೋದರ ಸಂಬಂಧಿ ದಿನವನ್ನು ಜುಲೈ 24ರಂದು ಆಚರಿಸಲಾಗುತ್ತದೆ. ಹಾಗಾದರೆ ಈ ದಿನದ ವಿಶೇಷತೆ ಏನು? ಹಿನ್ನಲೆ ಏನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.
ಯಾವಾಗ ಮತ್ತು ಯಾಕೆ ಕಸಿನ್ಸ್ ಡೇ ಆಚರಣೆ?
ಪ್ರತಿಯೊಂದು ಕುಟುಂಬದಲ್ಲೂ ಬಾಂಧವ್ಯವನ್ನು ಹೆಚ್ಚಿಸಲು ಮತ್ತು ತುಂಬಾ ದಿನಗಳ ಕಾಲ ಆ ಬಾಂಧವ್ಯ ಮತ್ತು ಸ್ನೇಹವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿವರ್ಷ ಜುಲೈ 24 ರಂದು ರಾಷ್ಟ್ರೀಯ ಸೋದರಸಂಬಂಧಿ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಕುಟುಂಬಗಳು ಸಾಮಾನ್ಯವಾಗಿ ದೊಡ್ಡದಾಗಿರುತ್ತವೆ, ಬೇಕಾದಷ್ಟು ಕಸಿನ್ಸ್ ಗಳು ಸಿಗುತ್ತಾರೆ, ಹೀಗಾಗಿ ಈ ದಿನವನ್ನು ನಿಮ್ಮ ಕಸಿನ್ಸ್ ಗಳೊಂದಿಗೆ ಪ್ರೀತಿಯಿಂದ ಕಳೆಯಬಹುದಾಗಿದೆ.
ಕಸಿನ್ಸ್ ದಿನದ ಇತಿಹಾಸ!
ಕಸಿನ್ಸ್ ದಿನದ ಮೂಲ ಇದುವರೆಗೂ ಯಾರಿಗೂ ತಿಳಿದಿಲ್ಲ. ಕಸಿನ್ಸ್ ದಿನವನ್ನು ಹೇಗೆ ಪ್ರಾರಂಭಿಸಲಾಯಿತು ಎಂಬುದರ ಹಿಂದೆ ಅನೇಕ ಸಿದ್ಧಾಂತಗಳಿದ್ದರೂ ಕೂಡ ಕಸಿನ್ಸ್ ಗಳು ತಮ್ಮ ಬಂಧ ಮತ್ತು ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸಲು ಈ ದಿನವನ್ನು ಪ್ರಾರಂಭಿದರು ಎಂದು ಕೆಲವರು ನಂಬುತ್ತಾರೆ. ಹೆಚ್ಚಿನವರು ಹೇಳುವಂತೆ ಶುಭಾಶಯ ಪತ್ರವನ್ನು ಹೆಚ್ಚು ಮಾರಾಟ ಮಾಡುವಲ್ಲಿ ಮಾರ್ಕೆಟಿಂಗ್ ಕಂಪೆನಿಯ ತಂತ್ರದಿಂದ ಈ ದಿನ ಜಾರಿಗೆ ಬಂದಿತು ಎನ್ನಲಾಗಿದೆ. ಹೀಗಾಗಿ ಇದು ಹೇಗೆ ಆರಂಭವಾಯ್ತು? ಏನಕ್ಕೆ ಆರಂಭವಾಯ್ತು ಎಂದು ತಿಳಿದುಬಂದಿಲ್ಲ. ಆದರೂ ಅಮೆರಿಕದಲ್ಲಿ ಕಸಿನ್ ಗಳು ಒಂದು ದಿನ ಸೇರಿ ಎಂಜಾಯ್ ಮಾಡುವ ಉದ್ದೇಶ ಹಾಗೂ ಆ ದಿನ ಯಾವತ್ತೂ ನೆನಪಿಟ್ಟುಕೊಳ್ಳುವಂತೆ ಮಾಡಿಕೊಳ್ಳುವ ಉದ್ದೇಶದಿಂದ ಕಸಿನ್ ದಿನವನ್ನು ಆಚರಿಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.
ಕಸಿನ್ಸ್ ದಿನ ಹೇಗೆ ಆಚರಿಸಬಹುದು!
ಕಸಿನ್ಸ್ ದಿನವನ್ನು ಯಾವ ರೀತಿ ಬೇಕಾದರೂ ನೀವು ಆಚರಿಸಬಹುದು. ಅದಕ್ಕೆ ಯಾವುದೇ ರೀತಿಯ ಅಡ್ಡಿ ಇಲ್ಲ. ವಿಜೃಂಭಣೆ ಅಥವಾ ಸಿಂಪಲ್ ಆಗಿ ಕೂಡ ಕಸಿನ್ಸ್ ಡೇ ಆಚರಿಸಬಹುದು. ಈ ದಿನದಂದು ಸಾಮಾನ್ಯವಾಗಿ ಕಾರ್ಡ್ ಕಳುಹಿಸುವ ಮೂಲಕ, ದೂರವಾಣಿಯಲ್ಲಿ ಕರೆ ಮಾಡುವ ಮೂಲಕ ಅಥವಾ ಅವರನ್ನು ಊಟಕ್ಕೆ ಅಥವಾ ಭೋಜನಕ್ಕೆ ಆಹ್ವಾನಿಸುವ ಮೂಲಕ ಆಚರಿಸಲಾಗುತ್ತದೆ. ಈ ರೀತಿಯಾಗಿ ಆಚರಣೆ ಮಾಡುವ ಮೂಲಕ ನಾವು ಅವರನ್ನು ಎಷ್ಟು ಪ್ರೀತಿಸುತ್ತೇವೆ ಮತ್ತು ಕಾಳಜಿ ವಹಿಸುತ್ತೇವೆ ಎಂದು ತೋರಿಸಬಹುದು. ಈ ದಿನದಂದು ನೀವು ಸೆಲ್ಫಿ ತೆಗೆದುಕೊಳ್ಳುವ ಮೂಲಕ ನೆನಪಿನಲ್ಲಿಡಬಹುದು. ಅಥವಾ ಎಲ್ಲಿಗಾದರೂ ಟ್ರಿಪ್ ಹೋಗಿ, ಕೇಕ್ ಕಟ್ ಮಾಡಿ ಈ ದಿನವನ್ನು ಖುಷಿಯಿಂದ ಆಚರಿಸಿಕೊಳ್ಳಬಹುದು. ಇನ್ನು ಕಸಿನ್ಸ್ ಗಳು ಗಿಫ್ಟ್ ಕೊಡುವ ಮೂಲಕ ಕಸಿನ್ಸ್ ಡೇ ಆಚರಣೆ ಮಾಡಬಹುದು.
ಯಾರಿದು ಕಸಿನ್ ಎಂದರೆ!
ಕಸಿನ್ ಗಳನ್ನು ಸೋದರ ಸಂಬಂಧಿ ಎನ್ನುತ್ತಾರೆ. ಅಪ್ಪ ಹಾಗೂ ಅಪ್ಪನ ಅಕ್ಕ, ತಂಗಿಯರು, ಅಣ್ಣ, ತಮ್ಮಂದಿರ ಮಕ್ಕಳು ಕಸಿನ್ಸ್ ಗಳಾಗುತ್ತಾರೆ. ಭಾರತದ ಸಂಪ್ರದಾಯದ ಪ್ರಕಾರ ಕಸಿನ್ಸ್ ಗಳನ್ನು ಸಹೋದರ-ಸಹೋದರಿಯಂತೆ ನೋಡುತ್ತಾರೆ. ಇನ್ನು ಕೆಲವರು ಕಸಿನ್ಸ್ ಗಳು ಮದುವೆ ಕೂಡ ಆಗುವುದು ಸಾಮಾನ್ಯವಾಗಿದೆ.