ಕಾಸರಗೋಡು: ಹಿರಿಯ ಬಿಜೆಪಿ ಕಾರ್ಯಕರ್ತ, ನಗರಸಭಾ ಪ್ರತಿಪಕ್ಷ ಮುಖಂಡ ಪಿ.ರಮೇಶ್(ಹುಬ್ಬಳ್ಳಿ ರಮೇಶ್) ಅವರ ಕಾಸರಗೋಡು ಅಡ್ಕತ್ತಬೈಲಿನಲ್ಲಿರುವ ನಿವಾಸಕ್ಕೆ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಎಸ್. ಅಂಗಾರ ಶುಕ್ರವಾರ ಭೇಟಿ ನೀಡಿದರು. ಪಾತಕಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ಅವರ ಅಂತಿಮದರ್ಶನಕ್ಕೆ ತೆರಳಿದ್ದ ರಮೇಶ್ ಅವರ ಮೇಲೆ ಪೊಲೀಸರು ವಿನಾಕಾರಣ ಲಾಟಿಪ್ರಹಾರ ನಡೆಸಿದ್ದು, ರಾಜ್ಯಾದ್ಯಂತ ಪ್ರತಿಭಟನೆಗೆ ಕಾರಣವಾಗಿದ್ದು, ಡ್ಯಾಮೇಜ್‍ಕಂಟ್ರೋಲ್ ನಡೆಸುವ ನಿಟ್ಟಿನಲ್ಲಿ ಈ ಭೇಟಿ ನಡೆದಿದೆಯೆನ್ನಲಾಗಿದೆ.
ಪಕ್ಷದ ಹಿರಿಯ ಕಾರ್ಯಕರ್ತ ರಮೇಶ್ ಅವರ ಮೇಲೆ ನಡೆದಿರುವ ಲಾಟಿಪ್ರಹಾರ ದುರಾದೃಷ್ಟಕರ. ಈ ಬಗ್ಗೆ ಗೃಹ ಇಲಾಖೆಗೆ ತಕ್ಷಣ ವರದಿ ಸಲ್ಲಿಸಲಾಗಿದ್ದು, ಪೊಲೀಸರ ನಡೆಯ ಬಗ್ಗೆ ಅಗತ್ಯ ಕ್ರಮವನ್ನೂ ಕೈಗೊಳ್ಳಲಾಗಿದೆ. ಹಿರಿಯ ಕಾರ್ಯಕರ್ತ ರಮೇಶ್ ಅವರ ಆರೋಗ್ಯ ವಿಚಾರಿಸಿಕೊಳ್ಳುವ ನಿಟ್ಟಿನಲ್ಲಿ ಆಗಮಿಸಿರುವುದಾಗಿ ಸಚಿವರು ತಿಳಿಸಿದ್ದಾರೆ. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ರವೀಶ ತಂತ್ರಿ ಕುಂಟಾರು, ಇತರ ಪದಾಧಿಕಾರಿಗಳು, ದ.ಕ ಜಿಲ್ಲಾ ಹಾಗೂ ಸುಳ್ಯ ಬಿಜೆಪಿ ಘಟಕ ಪದಾಧಿಕಾರಿಗಳಾದ ಹರೀಶ್ ಕಂಜಿಪಿಲಿ, ಎ.ವಿ ತೀರ್ಥರಾಮ, ವೆಂಕಟ್ ವಳಲಂಬೆ, ಕೇಶವ ಭಟ್ ಮುಳಿಯ, ವೆಂಕಟ್ ದಂಬೆಕೋಡಿ, ರಾಕೇಶ್ ರೈ ಕೆಡೆಂಜಿ, ಸುಬೋಧ್ ಶೆಟ್ಟಿ ಮೇನಾಲ ಸಚಿವರ ಜತೆಗಿದ್ದರು.