ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತ್ ಕುಟುಂಬಶ್ರೀ ಸಿಡಿಎಸ್ ನ ನೇತೃತ್ವದಲ್ಲಿ ಕರ್ಕಟಕಮಾಸದ ಔಷಧೀಯ ಗಂಜಿ ವಿತರಣೆ ವಿಶೇಷ ತಿಂಡಿ ತಿನಿಸುಗಳ ಕಾರ್ಯಕ್ರಮ ಗುರುವಾರ ನಡೆಯಿತು.
ಕಾರ್ಯಕ್ರಮವನ್ನು ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಾ ಬಿ. ಉದ್ಘಾಟಿಸಿ ತುಳುನಾಡು ಹಾಗೂ ತುಳುವರ ಆಚರಣೆಗಳು ಎಂದೂ ವಿಶೇಷ ಹಾಗೂ ವಿಭಿನ್ನ. ತುಳುವರ ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧವನ್ನು ಸಾರುವ ಆಚರಣೆಗಳಲ್ಲಿ ಆಟಿ ಅಮಾವಾಸ್ಯೆಯೂ ಒಂದು. ಆಟಿಯ ಮಳೆಯಂತೆ ಈ ತಿಂಗಳ ಆಹಾರ ಪದ್ಧತಿ ಜನರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದುದರಿಂದ ಹಿಂದಿನ ತುಳುನಾಡಿನ ಜನರ ಜೀವನ ಕ್ರಮವನ್ನು ಸ್ವಲ್ಪ ಮಟ್ಟಿಗಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬದಿಯಡ್ಕ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ರಶೀದಾ ಹಮೀದ್, ಪಂಚಾಯತಿ ಸದಸ್ಯರಾದ ಜಯಶ್ರೀ, ಡಿ.ಶಂಕರ, ಸ್ವಪ್ನಾ, ಶುಭಾಲತಾ, ಶ್ಯಾಮ್ ಪ್ರಸಾದ್ ಮಾನ್ಯ, ಜ್ಯೋತಿ , ಝುಬೈದಾ ಮುಂತಾದವರು ಶುಭಾಶಂಸನೆಗೈದರು.
ವೈದ್ಯರುಗಳಾದ ಚಾರ್ಲಿ ಮ್ಯಾಥ್ಯೂ ಮತ್ತು ಮಂಗಳ, ಕುಟುಂಬಶ್ರೀ ಸಿಡಿಯಸ್ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನೂರಕ್ಕಿಂತಲೂ ಹೆಚ್ಚು ವಿವಿಧ ತರದ ತಿಂಡಿತಿನಿಸುಗಳು ಇದ್ದು ಸಿಡಿಎಸ್ ಅಧ್ಯಕ್ಷೆ ಅನಿತಾ ಕ್ರಾಸ್ತಾ ಸ್ವಾಗತಿಸಿ, ಉಪಾಧ್ಯಕ್ಷೆ ಪ್ರೇಮಾ ಗಣೇಶ್ ವಂದಿಸಿದರು.