ರಾಯ್‌ಪುರ: ಭಾರತ ಸಾಕಷ್ಟು ವಿದೇಶಿ ವಿನಿಮಯ(ಫಾರೆಕ್ಸ್) ಸಂಗ್ರಹ ಹೊಂದಿದೆ. ಬಾಹ್ಯ ಸಾಲಗಳು ಕಡಿಮೆಯಾಗಿದೆ ಮತ್ತು ಶ್ರೀಲಂಕಾ ಹಾಗೂ ಪಾಕಿಸ್ತಾನದಂತಹ ಆರ್ಥಿಕ ಸಮಸ್ಯೆಗಳನ್ನು ದೇಶ ಹೊಂದಿಲ್ಲ ಎಂದು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಶನಿವಾರ ಹೇಳಿದ್ದಾರೆ.
"ನಮ್ಮಲ್ಲಿ ಸಾಕಷ್ಟು ವಿದೇಶಿ ವಿನಿಮಯ ಸಂಗ್ರಹ ಇದೆ. ಸಂಗ್ರಹ ಪ್ರಮಾಣವನ್ನು ಹೆಚ್ಚಿಸುವಲ್ಲಿ ಆರ್‌ಬಿಐ ಉತ್ತಮ ಕೆಲಸ ಮಾಡಿದೆ. ಶ್ರೀಲಂಕಾ ಮತ್ತು ಪಾಕಿಸ್ತಾನದಂತಹ ಸಮಸ್ಯೆಗಳು ನಮಗಿಲ್ಲ. ಅಂತಹ ಸ್ಥಿತಿ ಭಾರತಕ್ಕೆ ಬರಲ್ಲ. ನಮ್ಮ ವಿದೇಶಿ ಸಾಲವೂ ಕಡಿಮೆಯಾಗಿದೆ" ಎಂದು ರಾಜನ್ ಎಎನ್‌ಐಗೆ ತಿಳಿಸಿದ್ದಾರೆ.
ಇತ್ತೀಚಿನ ಆರ್‌ಬಿಐ ಅಂಕಿಅಂಶಗಳ ಪ್ರಕಾರ, ಜುಲೈ 22ಕ್ಕೆ ಅಂತ್ಯಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ(ಫಾರೆಕ್ಸ್) ಮೀಸಲು 571.56 ಬಿಲಿಯನ್ ಡಾಲರ್ ನಷ್ಟಿದೆ.
ಇತ್ತೀಚಿನ ಆರ್‌ಬಿಐ ಡೇಟಾ ಪ್ರಕಾರ, ಮಾರ್ಚ್ 2022 ರ ಅಂತ್ಯದ ವೇಳೆಗೆ ಭಾರತದ ಬಾಹ್ಯ ಸಾಲವು 620.7 ಬಿಲಿಯನ್ ಡಾಲರ್ ಆಗಿದೆ.
ಕಡಿಮೆ ವಿದೇಶಿ ಸಾಲ ಮತ್ತು ಹೆಚ್ಚಿನ ವಿದೇಶಿ ವಿನಿಮಯ ಸಂಗ್ರಹವು ಭಾರತೀಯ ಆರ್ಥಿಕತೆಯನ್ನು ಚೇತರಿಸಿಕೊಳ್ಳುವಂತೆ ಮಾಡುತ್ತದೆ. ಶ್ರೀಲಂಕಾ ಮತ್ತು ಪಾಕಿಸ್ತಾನದಂತಹ ದೇಶಗಳು ಅತ್ಯಂತ ಕಡಿಮೆ ಫಾರೆಕ್ಸ್ ಸಂಗ್ರಹ ಮತ್ತು ಹೆಚ್ಚುತ್ತಿರುವ ಬಾಹ್ಯ ಸಾಲಗಳಿಂದ ಆಳವಾದ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿವೆ ಎಂದು ರಾಜನ್ ಹೇಳಿದ್ದಾರೆ.