ಚಂಡೀಗಢ: ವಿಶ್ವ ಹಿಂದು ಪರಿಷದ್‍ನ ಹರ್ಯಾಣ ಘಟಕ ಶುಕ್ರವಾರ ಸಹಾಯವಾಣಿಯೊಂದನ್ನು ಆರಂಭಿಸಿದೆ, ಹಿಂದುಗಳಿಗೆ ದೇಶವಿರೋಧಿ ಶಕ್ತಿಗಳ ವಿರುದ್ಧ ಹೋರಾಡಲು ಸಹಾಯ ಮಾಡುವ ಉದ್ದೇಶದೊಂದಿಗೆ ಈ ಸಹಾಯವಾಣಿ ಆರಂಭಿಸಲಾಗಿದೆ ಎಂಬ ಮಾಹಿತಿಯಿದೆ.
"ಉದ್ಯಮ ಮಳಿಗೆಗಳ ಮೇಲೆ ದಾಳಿ, ಧಾರ್ಮಿಕ ತೀವ್ರಗಾಮಿತ್ತ ಮತ್ತು ಹಿಂದುಗಳನ್ನು ಗುರಿಯಾಗಿಸಿ ಹತ್ಯೆಯನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ" ಎಂದು ವಿಹಿಂಪದ ಮಾಧ್ಯಮ ಸಂಘಟಕ ಅನುರಾಜ್ ಕುಲಶ್ರೇóಷ್ಠ ಹೇಳಿದ್ದಾರೆಂದು ವರದಿಯಾಗಿದೆ. ದ್ವೇಷದ ಭಾಷಣ, ಹಿಂದು ದೇವರುಗಳು ಮತ್ತು ಆಚರಣೆಗಳಿಗೆ ಅಗೌರವ, ಲ್ಯಾಂಡ್ ಜಿಹಾದ್ ಅಥವಾ ಲವ್ ಜಿಹಾದ್‍ನಿಂದ ಬೆದರಿಕೆ ಎದುರಿಸುತ್ತಿರುವವರು ಈ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಮತಾಂತರ ಉದ್ದೇಶದಿಂದ ಮುಸ್ಲಿಂ ಪುರುಷರು ಹಿಂದು ಮಹಿಳೆಯರಿಗೆ ಆಮಿಷವೊಡ್ಡಿ ವಿವಾಹವಾಗುತ್ತಾರೆ, ಇದು ಲವ್ ಜಿಹಾದ್ ಎಂದು ಹಿಂದು ಸಂಘಟನೆಗಳು ವಾದಿಸಿದಂತೆಯೇ ಲ್ಯಾಂಡ್ ಜಿಹಾದ್ ಎಂಬ ಇನ್ನೊಂದು ಪದ ಹುಟ್ಟಿಕೊಂಡಿದ್ದು, ಮುಸ್ಲಿಮರು ದೊಡ್ಡ ಮೊತ್ತಕ್ಕೆ ಹಿಂದುಗಳ ಜಮೀನು ಖರೀದಿಸಿ ನಂತರ ನೆರೆಯವರನ್ನು ಬೆದರಿಸುತ್ತಾರೆಂಬ ಆರೋಪ ಹೊರಿಸಲಾಗುತ್ತಿದೆ.
"ಸಹಾಯವಾಣಿ ಮೂಲಕ ನಾವು ಹಿಂದುಗಳಿಗೆ ಶಸ್ತ್ರಾಸ್ತ್ರ ಪರವಾನಗಿ ಪಡೆಯಲು ಸಹಾಯ ಮಾಡುತ್ತೇವೆ. ಯಾರಾದರೂ ಬೆದರಿಕೆ ಎದುರಿಸಿದರೆ ನಾವು ಆಡಳಿತದ ಜೊತೆಗೆ ಮಾತನಾಡಿ ಅವರಿಗೆ ಶಸ್ತ್ರ ಪರವಾನಗಿ ದೊರೆಯುವಂತೆ ನೋಡಿಕೊಳ್ಳುತ್ತೇವೆ" ಎಂದು ವಿಹಿಂಪ ಹರ್ಯಾಣ ಘಟಕದ ಅಧ್ಯಕ್ಷ ಪವನ್ ಕುಮಾರ್ ಹೇಳುತ್ತಾರೆ.
ತನ್ನ ಸಹ ಸಂಸ್ಥೆಯಾದ ಬಜರಂಗದಳದ ಸಹಾಯವಾಣಿಯನ್ನೂ ಶುಕ್ರವಾರ ವಿಹಿಂಪ ಶೇರ್ ಮಾಡಿದೆ "ಜಿಹಾದಿ ಶಕ್ತಿಗಳಿಂದ ಬೆದರಿಕೆ ಎದುರಿಸುತ್ತಿರುವ" ಹಿಂದುಗಳಿಗೆ ಸಹಾಯ ಮಾಡಲು ಈ ಕ್ರಮಕೈಗೊಳ್ಳಲಾಗಿದೆ ಎಂದು ಸಂಘಟನೆ ಹೇಳಿಕೊಂಡಿದೆ.