ಕಾಸರಗೋಡು: ಪ್ಲಸ್ ಒನ್‍ನ ಹೊಸ ಬ್ಯಾಚ್‍ಗಳಿಗೆ ಅವಕಾಶ ನೀಡುವುದು, ಎಸ್ಸೆಸೆಲ್ಸಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಪ್ಲಸ್ ಒನ್ ಅಧ್ಯಯನಕ್ಕೆ ಬೇಕಾದ ಸೀಟುಗಳ ಖಾತ್ರಿಪಡಿಸುವುದು ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ಬಿಕ್ಕಟ್ಟನ್ನು ಪರಿಹರಿಸುವುದು ಮುಂತಾದ ಬೇಡಿಕೆ ಮುಂದಿರಿಸಿ ಫ್ರೆಟರ್ನಿಟಿ ಮೂವ್‍ಮೆಂಟ್ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಿತು.
ವೆಲ್ಫೇರ್ ಪಾರ್ಟಿ ರಾಜ್ಯ ಉಪಾಧ್ಯಕ್ಷ ರಜಾಕ್ ಪಾಲೇರಿ ಧರಣಿ ಉದ್ಘಾಟಿಸಿ ಮಾತನಾಡಿ, ಹೈಯರ್ ಸೆಕೆಂಡರಿ ತರಗತಿಯಲ್ಲಿ ಹೊಸ ಬ್ಯಾಚ್ ತಕ್ಷಣದಿಂದ ಮಂಜೂರುಗೊಳಿಸಬೇಕು. ಜಿಲ್ಲೆಯಲ್ಲಿ ಕೊರತೆಯಿರುವ 147 ಹೊಸ ಬ್ಯಾಚ್‍ಗಳನ್ನು ಮಂಜೂರುಗೊಳಿಸುವುದರ ಜತೆಗೆ ಪ್ರೌಢಶಾಲೆಗಳನ್ನು ಹೈಯರ್ ಸೆಕೆಂಡರಿಯಾಗಿ ಮೇಲ್ದರ್ಜೆಗೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಕೆ.ಅಶ್ರಫ್ ಮುಖ್ಯ ಭಾಷಣ ಮಾಡಿದರು. ಜಿಲ್ಲಾಧ್ಯಕ್ಷ ಸಿ.ಎ.ಯೂಸುಫ್ ಅಧ್ಯಕ್ಷತೆ ವಹಿಸಿದ್ದರು, ವೆಲ್ಫೇರ್ ಪಾರ್ಟಿ ರಾಜ್ಯ ಸಮಿತಿ ಸದಸ್ಯ ಸಿ.ಎಚ್.ಮುತ್ತಲಿಬ್, ಜಿಲ್ಲಾ ಖಜಾಂಚಿ ಅಂಬುಂಜಿ ತಲಕ್ಲಾಯಿ ಮುಂತಾದವರು ಉಪಸ್ಥಿತರಿದ್ದರು. ಧರಣಿಗೆ ಮೊದಲು ಕಾಸರಗೋಡು ಸರ್ಕಾರಿ ಕಾಲೇಜು ವಠಾರದಿಂದ ಕಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಯಿತು.