ನವದೆಹಲಿ: ಬಿಜೆಪಿ ನಾಯಕಿ ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕೆ ಹತ್ಯೆಗೀಡಾದ ಮಹಾರಾಷ್ಟ್ರ ಮೆಡಿಕಲ್ ಸ್ಚೋರ್ ವ್ಯಾಪಾರಿ ಹತ್ಯೆ ಪ್ರಕರಣ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ)ಕ್ಕೆ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಮರಾವತಿ ಮೂಲದ ಔಷಧ ಅಂಗಡಿ ಮಾಲೀಕ ಉಮೇಶ್ ಕೋಲ್ಹೆ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸುವಂತೆ ಆದೇಶಸಿದ್ದಾರೆ ಎಂದು ತಿಳಿದುಬಂದಿದೆ.
ಪುರ್ ಶರ್ಮಾ ಅವರ ಹೇಳಿಕೆಗಳನ್ನು ಬೆಂಬಲಿಸಿ ಔಷಧ ಅಂಗಡಿ ಮಾಲೀಕ ಉಮೇಶ್ ಕೋಲ್ಹೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಆದರೆ ಈ ಪೋಸ್ಟ್ ಮುಸ್ಲಿಮರು ಸದಸ್ಯರಾಗಿದ್ದ ವಾಟ್ಸಪ್ ಗ್ರೂಪ್ ನಲ್ಲೂ ಷೇರ್ ಆಗಿತ್ತು. ಇದರ ಬೆನ್ನಲ್ಲೇ ಅವರ ಹತ್ಯೆಯಾಗಿದೆ. ಅವರ ಅಂಗಡಿ ಗ್ರಾಹಕನೇ ಆಗಿದ್ದ ಪ್ರಕರಣದ ಪ್ರಮುಖ ಆರೋಪಿ ಇರ್ಫಾನ್ ಖಾನ್ ಮತ್ತು ಅಮರಾವತಿ ಸ್ಥಳೀಯ ನಿವಾಸಿಗಳು ಕೋಲ್ಹೆ ಅವರನ್ನು ಜೂನ್ 21ರಂದು ಹತ್ಯೆ ಮಾಡಿದ್ದರು.
ಅಂದು ರಾತ್ರಿ ಅಂಗಡಿ ಬಾಗಿಲು ಮುಚ್ಚಿ ಮನೆಗೆ ತೆರಳುತ್ತಿದ್ದ ಅವರ ಮೇಲೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿ ಚಾಕುವಿನಿಂದ ಹಲ್ಲೆ ಮಾಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಅವರ ಪುತ್ರ ಸಾಕೇತ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಸ್ತುತ ಮುದಸಿರ್ ಅಹಮದ್ (22), ಶಾರುಖ್ ಪಠಾಣ್ (25), ಅಬ್ದುಲ್ ತೌಫಿಕ್ (24) ಶೋಯಬ್ ಖಾನ್ (22) ಮತ್ತು ಅತಿಬ್ ರಶೀದ್ (22) ಎಂಬುವವರನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಇರ್ಫಾನ್ ಖಾನ್ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಜುಲೈ 5ರವರೆಗೂ ಆರೋಪಿಗಳು ಪೊಲೀಸ್ ಕಸ್ಟಡಿಗೆ
ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಐದು ಆರೋಪಿಗಳನ್ನು ಜುಲೈ 5ರವರೆಗೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆರೋಪಿಗಳ ಬಂಧನ ಬೆನ್ನಲ್ಲೇ ಪೊಲೀಸರು ಅವರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು ಈ ವೇಳೆ ಅವರನ್ನು 5 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ.