ಕಾಸರಗೋಡು: ಸ್ವಾತಂತ್ರ್ಯೋತ್ಸವದ 75 ನೇ ವಾರ್ಷಿಕ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಜಲಶಕ್ತಿ ಸಚಿವಾಲಯದ ಅಧಿನದಲ್ಲಿರುವ ಕೇಂದ್ರ ಅಂತರ್ಜಲ ಮಂಡಳಿ(ಕೇರಳ ವಲಯ) ವತಿಯಿಂದ ಜಲಾನಯನ ನಕ್ಷೆ ಮತ್ತು ಅಂತರ್ಜಲ ನಕ್ಷೆ ವಿಷಯದ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ಯೋಜನಾ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿ ಮಾತನಾಡಿ, ಮುಂದಿನ ತಲೆಮಾರಿಗೆ ನಾವು ಬ್ಯಾಂಕ್ ಉಳಿತಾಯ ಮಾಡುವ ಬದಲು ನೀರಿನ ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಕೇಂದ್ರ ಅಂತರ್ಜಲ ಮಂಡಳಿ ಕೇರಳ ಪ್ರಾದೇಶಿಕ ನಿರ್ದೇಶಕಿ ಟಿ.ಎಸ್.ಅನಿತಾ ಶ್ಯಾಮ್, ಕೇಂದ್ರ ಅಂತರ್ಜಲ ಮಂಡಳಿ ಕೇರಳ ವಲಯದ ವಿಜ್ಞಾನಿ ಎಸ್. ಸಿಂಗದುರೈ, ಕೇಂದ್ರೀಯ ಅಂತರ್ಜಲ ಮಂಡಳಿ ಕೇರಳ ಪ್ರದೇಶ ತಿರುವನಂತಪುರಂ ಡಾ.ಎನ್. ಅನೀಶ್‍ಕುಮಾರ್ ಹಾಗೂ ವಿವಿಧ ವಿಷಗಳ ಕುರಿತು ಜಾಗೃತಿ ತರಗತಿ ನಡೆಸಿದರು. ಕೇಂದ್ರೀಯ ಅಂತರ್ಜಲ ಮಂಡಳಿಯ ಕೇರಳ ಪ್ರಾದೇಶಿಕ ನಿರ್ದೇಶಕಿ ಟಿ.ಎಸ್.ಅನಿತಾ ಮಾತನಾಡಿ, ಕಾಸರಗೋಡು ಜಿಲ್ಲೆಯ ಶೇ.98 ರಷ್ಟು ಕೆಂಪುಕಲ್ಲು ಪ್ರದೇಶವಾಗಿದ್ದು, ಮಳೆ ನೀರು ಭೂಮಿಗೆ ಇಂಗದೆ ಮುದ್ರ ಸೇರುವುದರಿಂದ ನಮ್ಮಲ್ಲಿ ನೀರಿನ ಕೊರತೆ ಕಾಡುತ್ತದೆ. ನೀರಿನ ಕೊರತೆ ಎದುರಿಸುತ್ತಿರುವ ಜಿಲ್ಲೆಯಾಗಿ ನಾವು ಜಲಾನಯನ ಮ್ಯಾಪಿಂಗ್ ವ್ಯವಸ್ಥೆಯನ್ನು ಗರಿಷ್ಠ ರೀತಿಯಲ್ಲಿ ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ಅಂತರ್ಜಲ ಮಟ್ಟ ಹೆಚ್ಚಳ:
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ ಎಂದು ಕೇಂದ್ರ ಅಂತರ್ಜಲ ಮಂಡಳಿ ಕೇರಳ ವಲಯದ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ವಿವಿಧ ಜಲಸಂರಕ್ಷಣಾ ಚಟುವಟಿಕೆಗಳ ಮೂಲಕ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಶೇಕಡಾ ಎರಡರಷ್ಟು ಏರಿಕೆಯಾಗಿದೆ. ಕಾಸರಗೋಡು ಬ್ಲಾಕ್‍ನಲ್ಲಿ ಬೋರ್ಡ್ ನೇತೃತ್ವದ ಉದ್ಯೋಗ ಖಾತ್ರಿ ಯೋಜನೆಯಡಿ ಹಲವು ಜಲಮೂಲಗಳ ವಿಸ್ತರಣೆಯಿಂದ ನೀರಿನ ಮಟ್ಟ ಹೆಚ್ಚುವಂತಾಗಿದೆ. ಜಿಲ್ಲೆಯಲ್ಲಿ ಜಾರಿಯಲ್ಲಿರುವ ಕೊಳವೆ ಬಾವಿ ನಿರ್ಮಾಣಕ್ಕೆ ಕಡಿವಾಣ ಹಾಕಬೇಕಾದ ಅಗತ್ಯವಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.