ಕಾಸರಗೋಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ದಿಪಡೆದಿರುವ ತ್ರಿಕನ್ನಾಡ್ ಶ್ರೀ ತ್ರಯಂಬಕೇಶ್ವರ ದೇವಸ್ಥಾನ ಸೇರಿದಂತೆ ಕೇರಳದ ವಿವಿಧೆಡೆ ಕರ್ಕಾಟಕ ಹಬ್ಬದ ಪಿತೃರ್ಪಣ ಕಾರ್ಯಕ್ರಮ ಗುರುವಾರ ಜರುಗಿತು.
ತ್ರಿಕ್ಕನ್ನಾಡ್ ದೇವಸ್ಥಾನದಲ್ಲಿ ಬೆಳಗ್ಗೆ ಉಷ:ಪೂಜೆಯ ನಂತರ ತ್ರಿಕ್ಕನ್ನಾಡು ಕ್ಷೇತ್ರದ ಎದುರಿನ ಸಮುದ್ರ ದಡದಲ್ಲಿ ಬಲಿತರ್ಪಣ ಕಾರ್ಯಕ್ರಮ ಆರಂಭಗೊಂಡಿತು.
ಸಾವಿರಾರು ಮಂದಿ ಅಗಲಿದ ತಮ್ಮ ಹಿರಿಯರ ಸದ್ಗತಿಗಾಗಿ ಪಿಂಡಪ್ರದಾನ ಮಾಡಿದರು. ದೇವಸ್ಥಾನದ ಮುಖ್ಯ ಅರ್ಚಕ ನವೀನ್‍ಚಂದ್ರ ಕಾಯರ್ತಾಯ ಮತ್ತು ಪುರೋಹಿತ ರಾಜೇಂದ್ರ ಅರಳಿತ್ತಾಯ ಅವರ ನೇತೃತ್ವದಲ್ಲಿ ಏಕಕಾಲಕ್ಕೆ ಇಪ್ಪತ್ತಕ್ಕೂ ಹೆಚ್ಚು ವೈದಿಕರು ಬಲಿತರ್ಪಣ ಕಾರ್ಯ ನಡೆಸಿಕೊಟ್ಟರು. ಪಿತೃತರ್ಪಣಕ್ಕಾಗಿ ಬೆಳಗ್ಗಿನ ಜಾವ 3ಕ್ಕೇ ಭಕ್ತಾದಿಗಳು ದೇವಸ್ಥಾನಕ್ಕೆ ಬರಲಾರಂಭಿಸಿದ್ದರು. ಭಕ್ತಾದಿಗಳ ದಟ್ಟಣೆ, ನೂಕುನುಗ್ಗಲು ಕಡಿಮೆ ಮಾಡುವ ನಿಟ್ಟಿನಲ್ಲಿ ನೈವೇದ್ಯಕ್ಕೆ ಮುಂಗಡ ರಸೀದಿ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಬಲಿತರ್ಪಣ ಕಾರ್ಯಕ್ರಮದಲ್ಲಿ ಆರೋಗ್ಯ, ಸ್ಕೌಟ್ ಮತ್ತು ಗೈಡ್, ಪೋಲೀಸ್, ಕೋಸ್ಟ್ ಗಾರ್ಡ್, ರೋವರ್ ಮತ್ತು ರೇಂಜರ್ ಸೇವೆಯನ್ನು ಅಳವಡಿಸಲಾಗಿತ್ತು.
ಕರ್ಕಾಟಕ ಅಮವಾಸ್ಯೆ ಕೇರಳದ ಜನತೆಯ ಪಾಲಿಗೆ ನಹತ್ವದ್ದಾಗಿದ್ದು, ಇದರಲ್ಲಿ ಪಿತೃತರ್ಪಣ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ಕಲ್ಪಿಸಲಾಗುತ್ತಿದೆ. ಈ ದಿನದಂದು ಸರ್ಕಾರಿ ರಜೆ ಘೋಷಿಸಲಾಗಿತ್ತು. ಕಾಸರಗೋಡು, ಕಣ್ಣೂರು ಅಲ್ಲದೆ ದ.ಕ ಜಿಲ್ಲೆಯಿಂದಲೂ ಭಕ್ತಾದಿಗಳು ಆಗಮಿಸಿದ್ದರು.