ಕೆನಡಾ: ಕೆನಡಾದ ಕ್ಯಾನ್ಮೋರ್, ಕ್ಯಾಲ್ಗರಿದಲ್ಲಿ ನಡೆದ ದೋಣಿ ದುರಂತದಲ್ಲಿ ಭಾರತದ ಇಬ್ಬರು ಸಾವನ್ನಪ್ಪಿದ್ದು ಓರ್ವ ನಾಪತ್ತೆಯಾಗಿದ್ದಾರೆ.ಮೃತಪಟ್ಟ ಇಬ್ಬರು ಎರ್ನಾಕುಲಂ ಜಿಲ್ಲೆಯವರಾಗಿದ್ದು, ಅವರನ್ನು ಪೈಲಿ ಮತ್ತು ಜಾನ್ಸಿ ಅವರ ಪುತ್ರ ಜಿಯೋ ಪೈಲಿ (33) ಹಾಗೂ ಶಾಜಿ ವರ್ಗೀಸ್ ಮತ್ತು ಲಿಲ್ಲಿ ಅವರ ಪುತ್ರ ಕೆವಿನ್ ವರ್ಗೀಸ್ (21) ಎಂದು ಗುರುತಿಸಲಾಗಿದೆ.
ಕೆನಡಾದಲ್ಲಿರುವ ಮಲಯಾಳಿ ಅಸೋಸಿಯೇಷನ್ ನ ಸಾಮಾಜಿಕ ಜಾಲತಾಣದ ಪೋಸ್ಟ್ ನ ಪ್ರಕಾರ, ಲಿಯೊ ಮ್ಯಾಥ್ಯೂ (41) ಇನ್ನೂ ನಾಪತ್ತೆಯಾಗಿದ್ದು, ಶೋಧಕಾರ್ಯಾಚರಣೆ ಮುಂದುವರೆದಿದೆ. ಘಟನೆಯಲ್ಲಿ ತ್ರಿಶೂರ್ ಮೂಲದ ಜೀಜೋ ಜೋಸೆಫ್ ಅವರನ್ನು ರಕ್ಷಣೆ ಮಾಡಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಪ್ರೇ ಲೇಕ್ ಜಲಾಶಯದಲ್ಲಿ ಈ ಅವಘಡ ಸಂಭವಿಸಿದ್ದು, ಅಲ್ಲಿನ ಸ್ಥಳೀಯ ಸಮಯದ ಪ್ರಕಾರ ಬೆಳಿಗ್ಗೆ 10:30 ರ ವೇಳೆಗೆ ನಡೆದಿದೆ.
ಜಿಯೋ ಅವರಿಗೆ ಸೇರಿದ ಬೋಟ್ ನಲ್ಲಿ ಎಲ್ಲಾ ನಾಲ್ಕೂ ಮಂದಿ ಮೀನು ಹಿಡಿಯುವುದಕ್ಕೆ ಹೋಗಿದ್ದರು. ದೋಣಿ ಆಕಸ್ಮಿಕವಾಗಿ ತಲೆಕೆಳಗಾಗಿ ಜಲಾಶಯದ ಶೀತಲೀಕರಣಗೊಂಡಿದ್ದ ನೀರಿಗೆ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಜಿಯೋ 7 ವರ್ಷಗಳಿಂದ ಕೆನಡಾದಲ್ಲೇ ಇದ್ದು, ಆಟೋಮೊಬೈಲ್ ವರ್ಕ್ ಶಾಪ್ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.