ಗ್ಯಾಂಗ್ಟಕ್: ಅಸ್ಸಾಂನ ಇಂಜಿನಿಯರಿಂಗ್ ಕಾಲೇಜಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೂರ್ವ ಆಫ್ರಿಕಾ ಮೂಲದ ಕೀಟಗಳ ದಾಳಿಯಿಂದ ಗಾಯಗೊಂಡಿದ್ದಾರೆ. ಇತ್ತೀಚೆಗೆ ವಿದ್ಯಾರ್ಥಿಯೊಬ್ಬನ ಕೈಗೆ ಗಂಭೀರ ಗಾಯವಾಗಿದ್ದು, ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದಾನೆ ಎಂದು ಕಾಲೇಜಿನ ಅಧಿಕಾರಿಗಳು ತಿಳಿಸಿದ್ದಾರೆ.
ನೈರೋಬಿ ಫ್ಲೈಸ್ ಎಂದು ಗುರುತಿಸಲ್ಪಡುವ ಇವು ಕೆಂಪಿರುವೆಯಂತೆ ಕಂಡುಬರುವ, ಚೇಳಿನಂತೆ ಹಿಂಬದಿಯನ್ನು ಎತ್ತಿಕೊಂಡು ಓಡಾಡುವ ಕೀಟಗಳಾಗಿವೆ. ಇದರ ಮೂಲ ಪೂರ್ವ ಆಫ್ರಿಕಾವಾಗಿದ್ದು, ಸಿಕ್ಕಿಂನ ಮಾಝಿತರ್‌ನಲ್ಲಿರುವ ಮಣಿಪಾಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಸ್‌ಎಂಐಟಿ) ಕಾಲೇಜು ಆವರಣದಲ್ಲಿ ಕ್ಷಿಪ್ರ ಬೆಳವಣಿಗೆ ಹೊಂದುತ್ತಿವೆ.
ಕೀಟಗಳ ದಾಳಿಯಿಂದ ಗಾಯಗೊಂಡ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಕಾಲೇಜು ಆವರಣದಲ್ಲಿ ಕೀಟಗಳ ತೊಂದರೆಯನ್ನು ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.
ನೈರೋಬಿ ಫ್ಲೈಸ್- ಇವುಗಳು ಸ್ಥಳೀಯ ಕೀಟಗಳಲ್ಲ. ಸಾಕಷ್ಟು ಆಹಾರ ಸಿಗುವ ಜಾಗಗಳನ್ನು, ಸಂತಾನೋತ್ಪತ್ತಿಗೆ ಸಹಕಾರಿಯಾಗುವ ಪ್ರದೇಶಗಳನ್ನು ಸದಾ ಹುಡುಕುತ್ತ ಸಾಗುವ ಕೀಟಗಳಾಗಿವೆ. ಸಾಮಾನ್ಯವಾಗಿ ಇವುಗಳು ಬೆಳೆಗಳನ್ನು ಹಾಳು ಮಾಡುತ್ತವೆ.
ಈ ಕೀಟಗಳು ಕಚ್ಚುವುದಿಲ್ಲ. ಆದರೆ ಅವುಗಳ ಸ್ಪರ್ಶದಿಂದ ಚರ್ಮ ಕೆಂಪಗಾಗಿ, ವಿಪರೀತ ಉರಿಯಾಗುತ್ತದೆ. ಚರ್ಮದ ಮೇಲೆ ಕುಳಿತಂತ ಸಂದರ್ಭದಲ್ಲಿ ತೀಕ್ಷ್ಣವಾದ ಆಮ್ಲೀಯ ವಸ್ತುವನ್ನು ಬಿಡುಗಡೆ ಮಾಡುತ್ತವೆ. ಇದು ಚರ್ಮವು ಉರಿಯಲು ಕಾರಣ.
ಈ ಕೀಟಗಳನ್ನು ಮುಟ್ಟದೆ ಕೊಡವಿ ಅಥವಾ ಜೋರಾಗಿ ಊದಿ ಸೂಕ್ಷ್ಮವಾಗಿ ಕೆಡವಬೇಕು. ನಂತರ ಕೀಟವು ಕುಳಿತ ಭಾಗವನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆಯಬೇಕು.