ನಾಗ್ಪುರ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗ್ತಿದ್ದು ಜನರು ಜೀವ ಕಳೆದುಕೊಳ್ಳುತ್ತಿದ್ದಾರೆ. ನಾಗ್ಪುರದ ಸವ್ನೆರ್ ತೆಹ್ಸಿಲ್‌ನಲ್ಲಿ ಭಾರೀ ಮಳೆಯ ನಡುವೆ ಸೇತುವೆಯನ್ನು ದಾಟುವಾಗ ಕಾರು ಕೊಚ್ಚಿಹೋಗಿ ಮಹಿಳೆ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.
ವಾಹನದಲ್ಲಿ ಆರು ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಉಳಿದ ಮೂವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನದಲ್ಲಿದ್ದವರು ಮಧ್ಯಪ್ರದೇಶದ ಮುಲ್ತಾಯಿ ಮೂಲದವರು. ಅವರು ಮದುವೆ ಸಮಾರಂಭದಲ್ಲಿ ಭಾಗವಹಿಸಲು ನಾಗ್ಪುರಕ್ಕೆ ಬಂದಿದ್ದರು. ಮದುವೆ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೂನ್ 1 ರಿಂದ ಜುಲೈ 10 ರ ನಡುವೆ ಮಹಾರಾಷ್ಟ್ರದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 83 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೋಮವಾರ ವರದಿಯಲ್ಲಿ ತಿಳಿಸಿದೆ.
ಮುಂಬೈ ಮತ್ತು ಅದರ ಪಕ್ಕದ ಪ್ರದೇಶಗಳು ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಜೂನ್ 1 ಮತ್ತು ಜುಲೈ 10 ರ ನಡುವೆ ಭಾರೀ ಮಳೆಯಾಗಿದೆ. ಉತ್ತರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಗರಿಷ್ಠ 12 ಸಾವುಗಳು ದಾಖಲಾಗಿದ್ದರೆ, ನಾಗ್ಪುರದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ.