ಬದಿಯಡ್ಕ: ಲಕ್ಷಾಂತರ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿರುವ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿ ಬದಿಯನ್ನು ನೀರಿನ ಪೈಪು ಅಳವಡಿಸುವ ನೆಪದಲ್ಲಿ ಹಾಳುಗೆಡವಲಾಗುತ್ತಿದೆ. ಬದಿಯಡ್ಕದಿಂದ ಉಕ್ಕಿನಡ್ಕ ವರೆಗಿನ ರಸ್ತೆಯ ಕಾಮಗಾರಿ ಪೂರ್ತಿಗೊಳ್ಳುವ ಮೊದಲೇ ಪೈಪು ಅಳವಡಿಸುವ ಕಾಮಗಾರಿಯಿಂದ ರಸ್ತೆಗೆ ಹಾನಿಯುಂಟಾಗುತ್ತಿದೆ. ಒಂದೆಡೆ ಬಿರುಸಿನ ಮಳೆಗೆ ರಸ್ತೆಗಳೆಲ್ಲಾ ಹಾಳಾಗುತ್ತಿದ್ದರೆ, ಇನ್ನೊಂದೆಡೆ ದೂರವಾಣಿ, ನೀರಿನ ಪೈಪು ಸೇರಿದಂತೆ ವಿವಿಧ ಆವಶ್ಯಕತೆಗಾಗಿ ರಸ್ತೆ ಬದಿ ಅಗೆದು ಹೊಂಡ ನಿರ್ಮಿಸುತ್ತಿರುವುದರಿಂದ ಮತ್ತಷ್ಟು ಬೇಗನೆ ರಸ್ತೆಗಳು ಶಿಥಿಲಾವಸ್ಥೆ ತಲುಪುತ್ತಿದೆ.
ರಸ್ತೆ ಬದಿ ಮಳೆನೀರು ಸಂಚರಿಸಲು ನಿರ್ಮಿಸಿರುವ ಚರಂಡಿಯನ್ನೇ ಅಗೆದು ನೀರಿನ ಪೈಪು ಅಳವಡಿಸಲಾಗುತ್ತಿದೆ. ಪೈಪ್ ಅಳವಡಿಕೆ ಕಾಮಗಾರಿ ಕಳೆದ ನಂತರ ಇದನ್ನು ಸಮತಟ್ಟುಗೊಳಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಲೋಕೋಪಯೋಗಿ ಇಲಾಖೆ ಸ್ಪಷ್ಟ ಆದೇಶವಿದ್ದರೂ, ಇದು ಪಾಲನೆಯಾಗುತ್ತಿಲ್ಲ. ಇಲಾಖೆ ಅಧಿಕಾರಿಗಳೂ ಇದನ್ನು ಗಂಭೀರವಾಗಿ ಪರಿಗಣಿಸದಿರುವುದರಿಂದ ರಸ್ತೆ ಬದಿ ಪೈಪು ಅಳವಡಿಸುವ ಗುತ್ತಿಗೆದಾರರು ತಮಗೆ ತೋಚಿದಂತೆ ಕಾಮಗಾರಿ ಪೂರ್ತಿಗೊಳಿಸಿ ತೆರಳುತ್ತಾರೆ. ಇದರಿಂದ ಮೆಕ್ಕಡಾಂ ಡಾಂಬರೀಕರಣದ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ತಿಗೊಳ್ಳುವ ಮೊದಲೇ ವಿವಿಧೆಡೆ ಶಿಥಿಲಗೊಳ್ಳುತ್ತಿದೆ. ನೀರಿನ ಚರಂಡಿಯಿಲ್ಲದೆ ಮಳೆನೀರು ರಸ್ತೆಯಲ್ಲಿ ಸಾಗುವಂತಾಗಿದೆ. ಅಂತಾರಾಜ್ಯ ಸಂಪರ್ಕದ ಪ್ರಸಕ್ತ ರಸ್ತೆ, ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಗೂ ಸಂಪರ್ಕ ಕಲ್ಪಿಸುತ್ತಿದೆ. ಬೇಕಾಬಿಟ್ಟಿ ಕಾಮಗಾರಿಗಳಿಂದ ಮುಖ್ಯ ರಸ್ತೆಗಳು ಹಾಳಾಗುತ್ತಿರುವ ಬಗ್ಗೆ ಪಿಡಬ್ಲ್ಯೂಡಿ ಅಧಿಕಾರಿಗಳು ಗಮನಹರಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಅಭಿಮತ:
ರಸ್ತೆಬದಿ ಯಾವುದೇ ಕಾಮಗಾರಿ ನಡೆಸಲು ಷರತ್ತಿನೊಂದಿಗೆ ಅನುಮತಿ ನೀಡಲಾಗುತ್ತಿದೆ. ವಿವಿಧ ಇಲಾಖೆಗಳಿಗೆ ಪೈಪು ಅಳವಡಿಸಲು ಅನುಮತಿ ನೀಡುವ ಸಂದರ್ಭ ಯಥಾಪ್ರಕಾರ ಮುಚ್ಚಿ ಸಮತಟ್ಟುಗೊಳಿಸುವಂತೆ ಸ್ಪಷ್ಟ ನಿರ್ದೇಶನ ನೀಡಲಾಗುತ್ತಿದೆ. ಈ ಬಗ್ಗೆ ಲೋಪವೆಸಗಿದ್ದಲ್ಲಿ ತಕ್ಷಣ ಕ್ರಮ ಕೈಗೊಳ್ಳಲಾಗುವುದು.
ರಾಘವೇಂದ್ರ ಮಜಕ್ಕಾರ್, ಸಹಾಯಕ ಮುಖ್ಯ ಅಭಿಯಂತ,
ಲೋಕೋಪಯೋಗಿ ಇಲಾಖೆ, ಕಾಸರಗೋಡು