ತೆಮ್ಲಾ : ನರ್ಮದಾ ಬಚಾವೋ ಆಂದೋಲನದ ಮುಂದಾಳು ಮೇಧಾ ಪಾಟ್ಕರ್ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿಬಂದಿದ್ದು, ಇವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬುಡಕಟ್ಟು ವಿದ್ಯಾರ್ಥಿಗಳ ಶೈಕ್ಷಣಿಕ ಸೌಲಭ್ಯಗಳ ನಿರ್ವಹಣೆಗಾಗಿ ಸಂಗ್ರಹಿಸಿದ ಹಣವನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸುವ ಮೂಲಕ ದುರುಪಯೋಗ ಮಾಡಿದ್ದಾರೆ ಎಂಬ ತೀವ್ರಸ್ವರೂಪದ ಆರೋಪ ಇದಾಗಿದೆ.
ಮುಂಬೈನಲ್ಲಿ ನೋಂದಣಿಯಾಗಿರುವ ನರ್ಮದಾ ನವನಿರ್ಮಾಣ ಅಭಿಯಾನ (ಎನ್‌ಎನ್‌ಎ) ಟ್ರಸ್ಟ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ನರ್ಮದಾ ಕಣಿವೆಯ ಬುಡಕಟ್ಟು ವಿದ್ಯಾರ್ಥಿಗಳಿಗೆ ವಸತಿ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಕಳೆದ 14 ವರ್ಷಗಳಲ್ಲಿ ವಿವಿಧ ಮೂಲಗಳಿಂದ 13.50 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದು, ಆ ಹಣವನ್ನು ರಾಜಕೀಯ, ದೇಶವಿರೋಧಿ ಕಾರ್ಯಸೂಚಿಗೆ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಇದಾಗಿದೆ.
ಮೇಧಾ ಪಾಟ್ಕರ್ ಹಾಗೂ ಇತರ 11 ಮಂದಿ ವಿರುದ್ಧ ಮಧ್ಯಪ್ರದೇಶದ ತೆಮ್ಲಾ ಬುಜುರ್ಗ್ ಗ್ರಾಮದ ನಿವಾಸಿ ಪ್ರೀತಮ್‌ರಾಜ್ ಬಡೋಲೆ ಎನ್ನುವವರು ದೂರು ದಾಖಲು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲರ ವಿರುದ್ಧವೂ ಬರ್ವಾನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅದರ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ದೂರುದಾರರು ನಮಗೆ ಕೆಲವೊಂದು ದಾಖಲೆಗಳನ್ನು ನೀಡಿದ್ದಾರೆ. ಅದರ ಆಧಾರದ ಮೇಲೆ ತನಿಖೆ ನಡೆಸಲಾಗುವುದು. ಈ ಪ್ರಕರಣ ಹಳೆಯ ವಹಿವಾಟಿಗೆ ಸಂಬಂಧಿಸಿರುವುದರಿಂದ ವಿಸ್ತೃತ ತನಿಖೆ ಅಗತ್ಯವಿದೆ ಎಂದು ಬರ್ವಾನಿ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಕುಮಾರ್ ಶುಕ್ಲಾ ಮಾಹಿತಿ ನೀಡಿದ್ದಾರೆ. ಪ್ರಕರಣ ಎರಡು ರಾಜ್ಯಗಳಿಗೆ ಸಂಬಂಧಿಸಿದ್ದಾಗಿದೆ. ದಾಖಲೆಗಳು ಹಾಗೂ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುವುದು. ಈ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಪಕ್ಷಗಳಿಗೆ ತಮ್ಮ ಪರ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗುವುದು. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಮೇಧಾ ಪಾಟ್ಕರ್ ಸೇರಿದಂತೆ ಪರ್ವೀನ್ ರೂಮಿ ಜಹಾಂಗೀರ್, ವಿಜಯ ಚೌಹಾಣ್, ಕೈಲಾಶ್ ಅವಸ್ಯ, ಮೋಹನ್ ಪಾಟಿದಾರ್, ಆಶಿಶ್ ಮಂಡ್ಲೋಯ್, ಕೇವಲ್ ಸಿಂಗ್ ವಾಸವೆ, ಸಂಜಯ್ ಜೋಶಿ, ಶ್ಯಾಮ್ ಪಾಟೀಲ್, ಸುನೀತ್ ಎಸ್‌ಆರ್, ನೂರ್ಜಿ ಪದ್ವಿ ಮತ್ತು ಕೇಶವ್ ವಾಸವೆ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಆದರೆ ಈ ಆರೋಪವನ್ನು ಮೇಧಾ ತಳ್ಳಿಹಾಕಿದ್ದು, ಇದು ನನ್ನ ವಿರುದ್ಧ ಮಾಡಿರುವ ಪಿತೂರಿ ಎಂದಿದ್ದಾರೆ. ಇಂಥ ಆರೋಪ ಹಿಂದೆಯೂ ಬಂದಿದೆ. ನನ್ನ ಬಳಿ ಖಾತೆಗಳ ಸಂಪೂರ್ಣ ವಿವರ ಇದೆ. ವೆಚ್ಚಗಳನ್ನು ವಾರ್ಷಿಕವಾಗಿ ಸಂಪೂರ್ಣವಾಗಿ ಆಡಿಟ್ ಮಾಡಲಾಗುತ್ತದೆ. ಎಲ್ಲದಕ್ಕೂ ಉತ್ತರ ನೀಡಲು ಸಿದ್ಧ ಎಂದಿದ್ದಾರೆ.
ದೂರಿನ ಕುರಿತು ನನಗೆ ಮಾಹಿತಿ ಬಂದಿಲ್ಲ. ದೂರುದಾರರು ಆರ್ಎಸ್ಎಸ್ ಹಾಗೂ ಎಬಿವಿಪಿಯೊಂದಿಗೆ ನಂಟು ಹೊಂದಿರಬೇಕು. ಹಾಗಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಪ್ರತ್ಯುತ್ತರ ನೀಡಿದ್ದಾರೆ. ನಮ್ಮ ಟ್ರಸ್ಟ್ಗೆ ಯಾವುದೇ ವಿದೇಶ ಮೂಲಗಳಿಂದ ಹಣ ಬರುವುದಿಲ್ಲ. ಸಂಗ್ರಹಿಸಿದ ಹಣವನ್ನು ಸೂಕ್ತ ರೀತಿಯಲ್ಲೇ ಬಳಸಲಾಗುತ್ತದೆ. ನಾನು ಟ್ರಸ್ಟ್ ಕಾರ್ಯಕರ್ತೆಯಾದರೂ ಹಣಕಾಸು ವ್ಯವಹಾರದಲ್ಲಿ ಕೈ ಹಾಕುವುದಿಲ್ಲ. ಅದನ್ನು ನೋಡಿಕೊಳ್ಳಲು ಬೇರೆಯವರು ಇದ್ದಾರೆ ಎಂದೂ ಹೇಳಿದ್ದಾರೆ.