ನವದೆಹಲಿ: ರಾಜ್ಯದಲ್ಲಿ ಭಾರೀ ವಿವಾದದ ಕಿಡಿ ಹೊತ್ತಿಸಿದ್ದ ಹಿಜಾಬ್ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಹಿಜಾಬ್ ಬ್ಯಾನ್ ಮಾಡಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಬುಧವಾರ ಸಮ್ಮತಿ ನೀಡಿದ್ದು, ಮುಂದಿನ ವಾರ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.
ಹಿಜಾಬ್ ಬ್ಯಾನ್ ಮಾಡಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಕಳೆದ ಮಾರ್ಚ್ನಲ್ಲಿ ಅರ್ಜಿ ಸಲ್ಲಿಸಿದರೂ ಈವರೆಗೂ ಈ ವಿಚಾರವನ್ನು ಪಟ್ಟಿ ಮಾಡಿಲ್ಲ ಎಂದು ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಾಲಯದ ಮುಂದೆ ಪ್ರಸ್ತುತ ಪಡಿಸಿದರು. ಬಳಿಕ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಸಾಂವಿಧಾನಿಕ ಪೀಠವು ಮುಂದಿನ ವಾರ ಸೂಕ್ತ ಪೀಠದ ಮುಂದೆ ಈ ವಿಷಯವನ್ನು ಪಟ್ಟಿ ಮಾಡಲು ಒಪ್ಪಿಗೆ ಸೂಚಿಸಿತು.
ಏನಿದು ಪ್ರಕರಣ?
ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರಸಂಹಿತೆ ಜಾರಿ ಸಂಬಂಧ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಮತ್ತಿತರರಿಂದ ಕಳೆದ ಫೆ.5ರಂದು 10ಕ್ಕೂ ಅಧಿಕ ಅರ್ಜಿಗಳು ಹಾಗೂ ಮಧ್ಯಂತರ ಅರ್ಜಿಗಳು ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದವು. ಈ ಮೊದಲು ಅರ್ಜಿಗಳು ಏಕಸದಸ್ಯ ಪೀಠದಲ್ಲಿ ವಿಚಾರಣೆಗೆ ನಿಗದಿಯಾಗಿದ್ದವು. ಫೆ.8ರಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ವಾದ ಆಲಿಸಿತ್ತು. ಫೆ.9ರಂದು ಮತ್ತೆ ಅರ್ಜಿ ವಿಚಾರಣೆಗೆ ಬಂದಾಗ, ಪ್ರಕರಣವನ್ನು ವಿಸ್ತೃತ ಪೀಠದಲ್ಲಿ ನಿರ್ಧರಿಸುವುದು ಸೂಕ್ತವೆಂದು ಅಭಿಪ್ರಾಯಪಟ್ಟಿತ್ತು.
ಕಡತಗಳನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದಿಟ್ಟಿತ್ತು. ಅಂದೇ ಅರ್ಜಿಗಳ ವಿಚಾರಣೆಗೆ ಸಿಜೆಯೂ ಸೇರಿ ಮೂವರು ನ್ಯಾಯಮೂರ್ತಿಗಳನ್ನೊಳಗೊಂಡ ಪೂರ್ಣ ಪೀಠ ರಚಿಸಲಾಗಿತ್ತು. ಫೆ.10ರಂದು ಅರ್ಜಿ ವಿಚಾರಣೆ ನಡೆಸಿದ್ದ ಪೂರ್ಣ ಪೀಠ, ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ನ್ಯಾಯಾಲಯ ನಿರ್ಧಾರ ಕೈಗೊಳ್ಳುವವರೆಗೆ ಶಿಕ್ಷಣ ಸಂಸ್ಥೆಗಳಲ್ಲಿ ಯಾರೊಬ್ಬರೂ ಯಾವುದೇ ರೀತಿಯ ಧಾರ್ಮಿಕ ಆಚರಣೆಯ ಭಾಗವಾದ ಉಡುಪುಗಳನ್ನು ಧರಿಸಿ ಹಾಜರಾಗಬಾರದು ಎಂದು ಮಧ್ಯಂತರ ಆದೇಶ ನೀಡಿತ್ತು.
ಬಳಿಕ ಅರ್ಜಿ ಕುರಿತು ಸತತ 11 ದಿನಗಳ ವಿಚಾರಣೆ ನಡೆಸಿದ್ದ ಪೀಠ, ವಿದ್ಯಾರ್ಥಿನಿಯರು, ಸರ್ಕಾರ, ಕಾಲೇಜು ಅಭಿವೃದ್ಧಿ ಸಮಿತಿ, ಉಪನ್ಯಾಸಕರು, ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರ ವಾದ-ಪ್ರತಿವಾದ ಆಲಿಸಿತ್ತು. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರಿದ್ದ ಪೂರ್ಣಪೀಠ ಫೆ. 25ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಮಾ.15ರಂದು ಐತಿಹಾಸಿಕ ತೀರ್ಪು ಪ್ರಕಟಿಸಿದ ಹೈಕೋರ್ಟ್, ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದಿತು. ಅಲ್ಲದೆ, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನೂ ವಜಾಗೊಳಿಸಿತು. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ತೀರ್ಪು ನೀಡುವ ಮೂಲಕ ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಿಂದ ಎದ್ದಿದ್ದ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಿತು.
ಹೈಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಮುಸ್ಲಿಂ ನಾಯಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದರು. ಆದರೆ, ಸುಪ್ರೀಂಕೋರ್ಟ್ ತುರ್ತು ವಿಚಾರಣೆಯ ಮನವಿಯನ್ನು ತಿರಸ್ಕರಿಸಿತ್ತು. ಇದೀಗ ಸುಮಾರು 3 ತಿಂಗಳಿಗೂ ಹೆಚ್ಚು ಸಮಯದ ನಂತರ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿದೆ.
ವಿವಾದ ಹುಟ್ಟಿಕೊಂಡಿದ್ದು ಹೇಗೆ?
ಮೊದಲು ಹಿಜಾಬ್ ವಿವಾದ ಆರಂಭವಾಗಿದ್ದು ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ. ಬಳಿಕ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯೂ ಈ ವಿವಾದ ಸದ್ದು ಮಾಡಿತು. ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ವಿದ್ಯಾರ್ಥಿನಿಯರು ಒತ್ತಾಯಿಸ ತೊಡಗಿದರು. ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ತರಗತಿಯಲ್ಲಿ ಹಿಜಾಬ್ ಧರಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು. ಇದರಿಂದಾಗಿ ವಿದ್ಯಾರ್ಥಿನಿಯರು ತರಗತಿಯಿಂದ ಹೊರಗುಳಿದರು.
ವಿದ್ಯಾರ್ಥಿನಿಯರು, ಪೋಷಕರು, ಕಾಲೇಜಿನ ಆಡಳಿತ ಮಂಡಳಿ ನಡುವೆ ಜಟಾಪಟಿ ನಡೆಯಿತು. ವಿವಾದ ಬೇರೆ ಜಿಲ್ಲೆಗಳಿಗೆ ಹರಡುತ್ತಿದ್ದಂತೆ ಕೇಸರಿ ಶಾಲಿನ ಆಗಮನವಾಯಿತು. ಅವರಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದರೆ ನಾವು ಕೇಸರಿ ಶಾಲು ಹಾಕಿಕೊಂಡು ಬರುತ್ತೇವೆ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ಮೂರು ಪಕ್ಷದ ರಾಜಕೀಯ ನಾಯಕರು ಮಧ್ಯ ಪ್ರವೇಶ ಮಾಡಿ ಪರ-ವಿರೋಧ ಮಾತುಗಳನ್ನು ಆಡುವ ಮೂಲಕ ಹಿಜಾಬ್ ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದರು. ಇಡೀ ರಾಜ್ಯ ಕೋಮು ದಳ್ಳುರಿಯಲ್ಲಿ ಸುಡುತ್ತಿರುವಾಗ ರಾಜ್ಯ ಸರ್ಕಾರ ವಿವಾದದನ್ನು ತಣ್ಣಗಾಗಿಸಲು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತು ಮತ್ತು ವಸ್ತ್ರಸಂಹಿತೆ ಜಾರಿ ಮಾಡಿತು. ಇದರ ನಡುವೆ ಜನವರಿ 31ರಂದು ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಯಿತು.