ಕಾಸರಗೋಡು: ಜಿಲ್ಲೆಯ ತೇಜಸ್ವಿನಿ, ಮಧುವಾಹಿನಿ, ಉಪ್ಪಳ. ಶಿರಿಯ, ಕುಂಬಳೆ ಸೇರಿದಂತೆ ಪ್ರಮುಖ ಹೊಳೆಗಳು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೆರೆನೀರು ನುಗ್ಗಿ ಇಲ್ಲಿನ ಜನತೆ ಅಪಾಯ ಎದುರಿಸುತ್ತಿದ್ದಾರೆ. ನೆರೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಮಧೂರು ಸನಿಹದ ಪಟ್ಲದ ಹಲವು ಕುಟುಂಬಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲಾಯಿತು. ವೆಳ್ಳರಿಕುಂಡು ತಾಲೂಕಿನ ಪನತ್ತಡಿ ಕಮ್ಮಾಡಿ ಕಾಲನಿಯ ಹಲವು ಕುಟುಂಬಗಳು ನೆರೆನೀರಿನಲ್ಲಿ ಸಿಲುಕಿಕೊಂಡಿದ್ದು, 29ಮಂದಿಯನ್ನು ಸನಿಹದ ಏಕೋಪಾಧ್ಯಾಯ ಶಾಲೆಗೆ ಸ್ಥಳಾಂತರಿಸಲಾಗಿದೆ.
ಮಧೂರು ಮಧುವಾಹಿನಿ ಹೊಳೆ ತುಂಬಿ ಹರಿಯುತ್ತಿದ್ದು ದೇವಸ್ಥಾನದೊಳಗೆ ನುಗ್ಗಿದ ನೀರು, ಪೇಟೆಯ ರಸ್ತೆವರೆಗೂ ತುಂಬಿಕೊಂಡಿದೆ. ದೇಗುಲಕ್ಕೆ ಆಗಮಿಸಿದ ಭಕ್ತಾದಿಗಳು ಮೊಣಕಾಲಿನ ವರೆಗೂ ನೀರಿನಲ್ಲಿ ತೆರಳಿ ಶ್ರೀದೇವರ ದರ್ಶನ ಪಡೆದರು. ಪುತ್ತಿಗೆ ಶ್ರೀ ಕುಮಾರ ಸುಬ್ರಹ್ಮಣ್ಯ ದೇವಸ್ಥಾನ ಜಲಾವೃತಗೊಂಡಿದ್ದು, ಅರ್ಚಕರು ದೋಣಿಯಲ್ಲಿ ತೆರಳಿ ಪೂಜೆ ಸಲ್ಲಿಸುವುದು ಅನಿವಾರ್ಯವಾಗಿದೆ.
ಜಿಲ್ಲೆಯಲ್ಲಿ ಮುಂದಿನ ನಾಲ್ಕು ದಿವಸಗಳ ಕಾಲ ಬಿರುಸಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಸರಾಸರಿ ತಾಸಿಗೆ 45ರಿಂದ 55ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಜತೆಗೆ ಸಮುದ್ರದಲ್ಲಿ 3.5ರಿಂದ ನಾಲ್ಕು ಮೀ. ಎತ್ತರದ ಅಲೆಗಳು ಎದ್ದೇಳುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ.