ಮುಳ್ಳೇರಿಯ: ಹೊಸಪೇಟೆಯ ಯಾಜಿ ಪ್ರಕಾಶನವು ಪ್ರಕಟಿಸಿರುವ ವೈಕಂ ಮುಹಮ್ಮದ್ ಬಷೀರ್ ಅವರ ‘ಪ್ರೇಮಪತ್ರ’ ಅನುವಾದ ಕೃತಿಗಾಗಿ ಮೋಹನ ಕುಂಟಾರು ಅವರಿಗೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 2021ನೇ ಸಾಲಿನ ಪುಸ್ತಕ ಪ್ರಶಸ್ತಿ ಲಭಿಸಿದೆ. ಇದು 25,000 ರೂಪಾಯಿಗಳ ನಗದು ಪುರಸ್ಕಾರದೊಡನೆ ಸನ್ಮಾನ ಫಲಕವನ್ನು ಒಳಗೊಂಡಿರುತ್ತದೆ ಎಂದು ಕುವೆಂಪು ಭಾಷಾ ಭಾರತಿ ಪ್ರಕಟಣೆ ತಿಳಿಸಿದೆ.
ಮೋಹನ ಕುಂಟಾರ್ ಅವರು ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಮೂಲತಃ ಮುಳ್ಳೇರಿಯ ಸಮೀಪದ ಕುಂಟಾರಿನವರು. ಅವರು ಮಲಯಾಳಂನಿಂದ ಅನೇಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಕನ್ನಡ ಮಲಯಾಳಂಗೆ ಸಂಬಂಧಿಸಿದಂತೆ ಅನೇಕ ಅಧ್ಯಯನ ಕೃತಿಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಯಕ್ಷಗಾನ, ಭಾಷೆ, ಭಾಷಾಂತರ ಸಿದ್ಧಾಂತಗಳಿಗೆ ಸಂಬಂಧಿಸಿದಂತೆ ಹಲವಾರು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಸಂಶೋಧನೆಗಾಗಿ ಕನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ ಪುಸ್ತಕ ಪ್ರಶಸ್ತಿಗಳನ್ನು ಹಾಗೂ ಇನ್ನೂ ಅನೇಕ ಪ್ರತಿಷ್ಠಿತ ಸಂಸ್ಥೆಗಳಿಂದ ಪ್ರಶಸ್ತಿಯ ಗೌರವಗಳನ್ನು ಪಡೆದಿರುತ್ತಾರೆ.
ಪ್ರಸ್ತುತ ‘ಪ್ರೇಮ ಪತ್ರವು’ ವೈಕಂ ಅವರ ಮಲಯಾಳಂ ಕತೆಗಳ ಕನ್ನಡ ಅನುವಾದ. ಇದರಲ್ಲಿ ಇಪ್ಪತ್ಮೂರು ಕತೆಗಳಿವೆ. ಮಲಯಾಳಂ ಕತೆಯು ಆದಷ್ಟು ಮಟ್ಟಿಗೆ ಅದು ಇರುವ ಹಾಗೆಯೇ ತೋರುವ ನುಡಿಕನ್ನಡಿ ಆಗಬೇಕು ಅನ್ನುವುದು ಕುಂಟಾರ್ ಅವರ ಈ ಸಂಕಲನದ ಉದ್ದೇಶ. ಇದರಿಂದ ಬಷೀರ್ ಅವರ ನುಡಿಬಳಕೆ, ವ್ಯಂಗ್ಯ ವಿನೋದ ಧೋರಣೆ ಇವು ಮಲಯಾಳಂನಲ್ಲಿ ವ್ಯಕ್ತವಾದ ಬಗೆಯನ್ನು ಓದುಗರಿಗೆ ಊಹಿಸಿಕೊಳ್ಳಲು ಅನುಕೂಲವಾಗಿದೆ. ವಿನೋದದ ಧಾಟಿ ಮುಖ್ಯವಾಗಿರುವ, ಪ್ರೀತಿಯ ವಸ್ತುಗಳನ್ನು ಒಳಗೊಂಡಿರುವ ಕತೆಗಳನ್ನು ಇದರಲ್ಲಿ ಆಯ್ದುಕೊಳ್ಳಲಾಗಿದೆ. ಇದರಿಂದ ಮಲಯಾಳಂಗೆ ಸಹಜವೆನಿಸುವ ಇಂದಿನ ಕನ್ನಡ ಕತೆಗಳ ಭಾಷೆಗೆ ಹೊಂದದ ಸಂಸ್ಕøತ ಪದಗಳ ಬಳಕೆ ವೈನೋದಿಕಕ್ಕೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುವಂತಾಗಿದೆ. ಈ ಎಲ್ಲಾ ಕಾರಣಕ್ಕೆ ಇದೊಂದು ಮುಖ್ಯ ಅನುವಾದ ಕೃತಿಯಾಗಿದೆ. ಎರಡು ನುಡಿಗಳ ಸೇತುವೆಯಾಗಿ ಮೋಹನ ಕುಂಟಾರ್ ಅವರ ಸಾಧನೆ ಗಮನಾರ್ಹ.