ಮುಂಬೈ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಚರಿತ್ರೆಯೇ ರೋಚಕವಾದದ್ದು. ಕಾಂಗ್ರೆಸ್ಸೇತರ ಸರ್ಕಾರ ರಚಿಸಿ ಪೂರ್ಣಾವಧಿಯವರೆಗೆ ಆಡಳಿತ ನಡೆಸಿದವರಲ್ಲಿ ಮೊದಲಿಗರು. ದಿಟ್ಟ ನಡೆಗಳ ಇವರು ಶಾಂತಿಪ್ರಿಯರು ಎಂದೇ ಗುರುತಿಸಿಕೊಂಡವರು.
ಕಾರ್ಗಿಲ್ ಯುದ್ಧದ ಅವಧಿಯಲ್ಲಿ ದೇಶ ಮುನ್ನಡೆಸಿದ ಚಾಣಾಕ್ಷರೆಂದೆ ಗುರುತಿಸಿಕೊಂಡು ಜನಪ್ರಿಯತೆ ಗಳಿಸಿದವರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದ ಇವರು, 1951ರಲ್ಲಿ ಜನಸಂಘ ಸ್ಥಾಪನೆಯಲ್ಲಿ ಕಾರಣೀಕರ್ತರಾಗಿದ್ದರು. 1977ರಲ್ಲಿ ತುರ್ತುಪರಿಸ್ಥಿತಿ ವೇಳೆ ಜೈಲಿಗೆ ತಳ್ಳಲ್ಪಟ್ಟ ಇವರು, 1979ರಲ್ಲಿ ಚುನಾವಣೆಯಲ್ಲಿ ಜಯಗಳಿಸಿ ಕೇಂದ್ರ ಸರ್ಕಾರದ ಬಾಹ್ಯ ವ್ಯವಹಾರಗಳ ಮಂತ್ತಿ, ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದರು.
ಹೀಗೆ ಹಲವಾರು ರೋಚಕ ಕಥೆ ಇರುವ ಇವರ ಜೀವನ ಚರಿತ್ರೆಯು ಅವರ ಪುಸ್ತಕ - ದಿ ಅನ್‌ಟೋಲ್ಡ್ ವಾಜಪೇಯಿ: ಪೊಲೀಟಿಶೀಯನ್ ಆಯಂಡ್ ಪ್ಯಾರಾಡಾಕ್ಸ್ನಲ್ಲಿ ಉಲ್ಲೇಖವಾಗಿದೆ. ಈ ಪುಸ್ತಕವನ್ನು ಆಧರಿಸಿ ಇದೀಗ ಸಿನಿಮಾ ನಿರ್ಮಾಣವಾಗುತ್ತಿದೆ.
ಅಟಲ್ ಬಿಹಾರಿ ವಾಜಪೇಯಿ ಅವರ ಕುರಿತು ಸಿನಿಮಾ ಮಾಡುತ್ತಿರುವ ಬಗ್ಗೆ ಚಿತ್ರತಂಡ ಕಳೆದ ತಿಂಗಳು ಮಾಹಿತಿ ನೀಡಿತ್ತು. ಈ ಬಗ್ಗೆ ನಿರ್ದೇಶಕ ಸಂದೀಪ್ ಸಿಂಗ್ ಸಿನಿಮಾ ನಿರ್ಮಾಣ ಹಂತದಲ್ಲಿದೆ ಎಂದು ಖಚಿತಪಡಿಸಿದ್ದರು. ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಕೂಡ ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ಇದನ್ನು ಉಲ್ಲೇಖಿಸಿದ್ದರು. ಆದರೆ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಬಲ್ಲ ಸರಿಯಾದ ನಟನ ಹುಡುಕಾಟದಲ್ಲಿತ್ತು. ಇದೀಗ ಚಿತ್ರತಂಡಕ್ಕೆ ಸಿಕ್ಕಿರುವುದು ನಟ ಪಂಕಜ್ ತ್ರಿಪಾಠಿ.
ಅದ್ಭುತ ಪಾತ್ರಗಳ ಮೂಲಕ ತೆರೆಯ ಮೇಲೆ ಜನರನ್ನು ರಂಜಿಸಿರುವ ನಟ ಪಂಕಜ್ ತ್ರಿಪಾಠಿ, ಅವರ ಅಸಾಧಾರಣ ಅಭಿನಯದಿಂದ ಜನರ ಫೇವರೇಟ್ ನಟ ಎನಿಸಿಕೊಂಡಿದ್ದಾರೆ. ಲುಡೋ ಚಿತ್ರದಲ್ಲಿನ ಅವರ ಪಾತ್ರಕ್ಕಾಗಿ ನಟ ಇತ್ತೀಚೆಗೆ ಇಂಟರ್ನ್ಯಾಷನ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್ಸ್ (IIFA) 2022 ನಲ್ಲಿ ಪೋಷಕ ಪಾತ್ರ (Male) ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈಗ ಮೇನ್ ರಹೂನ್ ಯಾ ನಾ ರಹೂನ್, ಯೇ ದೇಶ್ ರೆಹನಾ ಚಾಹಿಯೇ - ಅಟಲ್ ಎಂಬ ಮುಂಬರುವ ಬಯೋಪಿಕ್ ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರವನ್ನು ನಿರ್ವಹಿಸಲು ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಪಂಕಜ್ ಪ್ರತಿಯೊಂದು ಸಿನಿಮಾದಲ್ಲಿ ಅದ್ಭುತ ನಟನೆಯ ಮೂಲಕ ಆ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ. ಹಾಗಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರವನ್ನು ನಿರ್ವಹಿಸಲು ಇವರೇ ಸರಿ ಎಂದು ಚಿತ್ರತಂಡ ತಿಳಿಸಿದೆ. ವಿನೋದ್ ಭಾನುಶಾಲಿ ಮತ್ತು ಸಂದೀಪ್ ಸಿಂಗ್ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡಲಿದ್ದು, 2023ರಲ್ಲಿ ಸಿನಿಮಾ ಸಿದ್ದವಾಗಲಿದೆ ಎನ್ನಲಾಗುತ್ತಿದೆ.