ನವದೆಹಲಿ :ಸುದ್ದಿ ತಾಣ ನ್ಯೂಸ್ ಲಾಂಡ್ರಿ ವಿರುದ್ಧ ಕೃತಿಸ್ವಾಮ್ಯ ಉಲ್ಲಂಘನೆ ಮತ್ತು ಮಾನನಷ್ಟ ಆರೋಪ ಹೊರಿಸಿ ಇಂಡಿಯಾ ಟುಡೇ ಮತ್ತು ಆಜ್ ತಕ್ ಒಡೆತನ ಹೊಂದಿರುವ ಟಿವಿ ಟುಡೇ ನೆಟ್‍ವರ್ಕ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದಿಲ್ಲಿ ಹೈಕೋರ್ಟ್, ಇಂಡಿಯಾ ಟುಡೇ ಮತ್ತು ಆಜ್ ತಕ್ ವಾಹಿನಿಗಳ ವೀಡಿಯೋ ಕ್ಲಿಪ್‍ಗಳನ್ನು ತನ್ನ ವೆಬ್‍ತಾಣದಿಂದ ತೆಗೆದುಹಾಕುವಂತೆ ನ್ಯೂಸ್‍ಲಾಂಡ್ರಿಗೆ ಆದೇಶಿಸಲು ನಿರಾಕರಿಸಿದೆ.
ಅರ್ಜಿದಾರರ ವಾದ ಹೊರನೋಟಕ್ಕೆ ಸರಿ ಎಂದು ಕಂಡರೂ ಅವರು ಹೊರಿಸಿದ ಆರೋಪವನ್ನು ಪರಿಗಣಿಸಿದಾಗ ನ್ಯೂಸ್‍ಲಾಂಡ್ರಿಯಿಂದ ಅದಕ್ಕೆ ತುಂಬಲಾರದ ನಷ್ಟ ಉಂಟಾಗಿಲ್ಲದೇ ಇರುವುದರಿಂದ ಮಧ್ಯಂತರ ತಡೆಯಾಜ್ಞೆ ವಿಧಿಸಲು ಸಾಧ್ಯವಿಲ್ಲ ಎಂದು ಜಸ್ಟಿಸ್ ಆಶಾ ಮೆನನ್ ಹೇಳಿದರು.
ಈ ಪ್ರಕರಣವನ್ನು ವಾಣಿಜ್ಯ ವಿವಾದ ಎಂದು ಪರಿಗಣಿಸಿ ಕೃತಿಸ್ವಾಮ್ಯ ಉಲ್ಲಂಘನೆಯಡಿ ತನಿಖೆ ನಡೆಸದೆ ಪ್ರಸಾರ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಿ ತನಿಖೆ ನಡೆಸಬೇಕೆಂದು ನ್ಯಾಯಾಲಯ ಹೇಳಿದೆ.
ಟಿವಿ ಟುಡೇ ಸಂಸ್ಥೆಯು ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ನ್ಯೂಸ್‍ಲಾಂಡ್ರಿ ವಿರುದ್ಧ ದಿಲ್ಲಿ ಹೈಕೋರ್ಟಿನಲ್ಲಿ ಮಾನನಷ್ಟ ಪ್ರಕರಣ ದಾಖಲಿಸಿತ್ತಲ್ಲದೆ ಅನುಮತಿಯಿಲ್ಲದೆ ಇಂಡಿಯಾ ಟುಡೇ, ಆಜ್ ತಕ್ ಮತ್ತು ಗುಡ್ ನ್ಯೂಸ್ ಟುಡೇ ಇವುಗಳ ವೀಡಿಯೋ ತುಣುಕುಗಳನ್ನು ತನ್ನ ಶೋ ಗಳಲ್ಲಿ ಬಳಸಿದೆ ಎಂದು ದೂರಿತ್ತು. ಅರ್ಜಿಯಲ್ಲಿ ನ್ಯೂಸ್ ಲಾಂಡ್ರಿಯ ಸ್ಥಾಪಕ ಅಭಿನಂದನ್ ಸೆಖ್ರಿ, ನಿರ್ದೇಶಕರು, ಪತ್ರಕರ್ತರು, ಸಂಪಾದಕರ ಹೆಸರುಗಳನ್ನೂ ಉಲ್ಲೇಖಿಸಲಾಗಿತ್ತು.
ಈ ವೀಡಿಯೋಗಳನ್ನು ತೆಗೆದುಹಾಕಬೇಕು ಹಾಗೂ ವೆಬ್‍ಸೈಟ್ ಮತ್ತದರ ಯುಟ್ಯೂಬ್ ಚಾನಲ್ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ರೂ 2 ಕೋಟಿ ಮಾನನಷ್ಟ ಪರಿಹಾರ ನೀಡಬೇಕೆಂದು ಟಿವಿ ಟುಡೇ ನೆಟ್‍ವರ್ಕ್ ಕೋರಿತ್ತು.
ಕೃತಿಸ್ವಾಮ್ಯ ಉಲ್ಲಂಘನೆಗಾಗಿ ಇಂಡಿಯಾ ಟುಡೇ ಗುಂಪು ಹಲವು ಬಾರಿ ವರದಿ ಮಾಡಿದ ಹಿನ್ನೆಲೆಯಲ್ಲಿ ತನ್ನ ಯುಟ್ಯೂಬ್ ಚಾನಲ್ ಅನ್ನು ಫ್ರೀಝ್ ಮಾಡಲಾಗಿತ್ತು ಎಂದು ನ್ಯೂಸ್‍ಲಾಂಡ್ರಿ ಹೇಳಿಕೊಂಡಿತ್ತು.