ತಿರುವನಂತಪುರ: ಏಷ್ಯಾನೆಟ್ ನ್ಯೂಸ್ ಮಾಧ್ಯಮ ಹಿರಿಯ ಭಾತ್ಮೀದಾರ ವಿನು ವಿ ಜಾನ್ ವಿರುದ್ಧ ಕೈಗೊಂಡಿರುವ ಸುಳ್ಳು ಆರೋಪ ಹೊರಿಸಲಾಗಿದ್ದು, ಪೋಲೀಸರು ಮತ್ತು ರಾಜ್ಯ ಸರ್ಕಾರದ ಕ್ರಮವನ್ನು ಫ್ಯಾಸಿಸಂ ಎಂದು ತಿರುವನಂತಪುರಂ ಪ್ರೆಸ್ ಕ್ಲಬ್ ಬಣ್ಣಿಸಿದೆ. ವಿನು ವಿ ಜಾನ್ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿಸುವ ಮೂಲಕ ಪಾಸ್ ಪೋರ್ಟ್ ಅನ್ನು ಸಹ ಅಮಾನತುಗೊಳಿಸಿರುವ ಬಗ್ಗೆ ಕೇರಳ ಪೋಲೀಸರ ಕ್ರಮವನ್ನು ಬಲವಾಗಿ ಖಂಡಿಸುವುದಾಗಿ ಪ್ರೆಸ್ ಕ್ಲಬ್ ಹೇಳಿಕೆಯಲ್ಲಿ ತಿಳಿಸಿದೆ.
ಸುದ್ದಿ ನಿರೂಪಣೆಯ ಸಂದರ್ಭದಲ್ಲಿ ಆಡಳಿತ ಪಕ್ಷದ ನಾಯಕನ ವಿರುದ್ಧ ಟೀಕೆಗಳನ್ನು ಮಾಡಿದ್ದಕ್ಕಾಗಿ ಫ್ಯಾಸಿಸ್ಟ್ ತರಹ ಸುಳ್ಳು ಆರೋಪದಡಿ ಬೇಟೆಯಾಡಲಾಗಿದೆ. ರಾಷ್ಟ್ರವ್ಯಾಪಿ ಹರತಾಳಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿ ನಡೆದ ಹಿಂಸಾಚಾರದ ವಿರುದ್ಧ ಚಾನೆಲ್ ಚರ್ಚೆಯ ವೇಳೆ ಎಳಮರಮ್ ಕರೀಂ ಸಂಸದರ ವಿರುದ್ಧ ಹೇಳಿಕೆ ನೀಡಿದ ವಿನು ವಿ ಜಾನ್ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿದ್ದು, ಪ್ರತೀಕಾರದ ಕ್ರಮಗಳಿಗೆ ಸಿದ್ಧತೆ ನಡೆಸಿದ್ದಾರೆ. ಪ್ರಕರಣದ ಬಗ್ಗೆ ಪೋಲೀಸರು ವಿನುಗೂ ಮಾಹಿತಿ ನೀಡಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾಧ್ಯಮ ಸ್ವಾತಂತ್ರ್ಯ ಮತ್ತು ನಾಗರಿಕ ಹಕ್ಕುಗಳನ್ನು ನಾಶಪಡಿಸುವ ಹೇಯ ನಡೆ ಪೋಲೀಸರ ಕಡೆಯಿಂದ ನಡೆಯುತ್ತಿದೆ. ಆಡಳಿತ ಪಕ್ಷದ ನಾಯಕರ ಹಿತಾಸಕ್ತಿಗೆ ಮಣಿದು ಸುಳ್ಳು ಪ್ರಕರಣಗಳಲ್ಲಿ ಮಾಧ್ಯಮದವರ ಬಾಯಿ ಮುಚ್ಚಿಸುವ ಕ್ರಮದಿಂದ ಪೋಲೀಸರು ಹಾಗೂ ಸರಕಾರ ಹಿಂದೆ ಸರಿಯಬೇಕು. ವಿನು ವಿ ಜಾನ್ ವಿರುದ್ಧದ ನಕಲಿ ಪ್ರಕರಣವನ್ನು ಹಿಂಪಡೆದು ಮಾಧ್ಯಮ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಸರ್ಕಾರ ಸಿದ್ಧವಿಲ್ಲದಿದ್ದರೆ, ತೀವ್ರ ಪ್ರತಿಭಟನೆ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿರುವನಂತಪುರಂ ಪ್ರೆಸ್ ಕ್ಲಬ್ ತಿಳಿಸಿದೆ.