ಮುಂಬೈ: ಕಳೆದ ಎರಡು ವರ್ಷಗಳಿಂದ ಭಾರಿ ಸುದ್ದಿ ಮಾಡುತ್ತಿರುವ ಡ್ರಗ್ಸ್ ಲೋಕದ ಭಯಾನಕ ಘಟನೆಗಳು ಬೆಳಕಿಗೆ ಬರಲು ಕಾರಣವಾದದ್ದು 2020ರ ಜೂನ್ 14ರಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರು ಬಾಂದ್ರಾ ನಿವಾಸದಲ್ಲಿ ಶವವಾಗಿ ಪತ್ತೆಯಾದದ್ದು.
ಇದೀಗ ಕುತೂಹಲ ಎನ್ನುವಂತೆ ಇವರ ಸಾವಿಗೆ ಕಾರಣವಾಗಿರುವ ವ್ಯಕ್ತಿಗಳ ಕುರಿತು ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳು ಪುನಃ ಸುಶಾಂತ್ ಸಿಂಗ್ ಅವರ ಸ್ನೇಹಿತೆ ರಿಯಾ ಚಕ್ರವರ್ತಿಯವರತ್ತ ಬೊಟ್ಟು ಮಾಡಿದ್ದಾರೆ.
ಈ ಪ್ರಕರಣದಲ್ಲಿ ರಿಯಾ ಚಕ್ರವರ್ತಿಯನ್ನು ಅದೇ ವರ್ಷ ಸೆಪ್ಟೆಂಬರ್ 8 ರಂದು ಬಂಧಿಸಲಾಗಿತ್ತು. ಮುಂಬೈನ ಬೈಕುಲ್ಲಾ ಜೈಲಿನಲ್ಲಿ ಒಂದು ತಿಂಗಳ ನಂತರ ಆಕೆಗೆ ಜಾಮೀನು ನೀಡಲಾಗಿದೆ. ಆದರೆ ಅವರ ವಿರುದ್ಧವೂ ತನಿಖೆ ಮುಂದುವರೆದಿದ್ದು, ಇದೀಗ ಮತ್ತಷ್ಟು ಅಂಶಗಳು ಬೆಳಕಿಗೆ ಬಂದಿವೆ. ಸುಶಾಂತ್ ಸಿಂಗ್ಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದುದು ಇದೇ ರಿಯಾ ಎನ್ನುವ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದಿದ್ದು, ಈ ಕುರಿತು ಚಾರ್ಜ್ಷೀಟ್ನಲ್ಲಿ ತನಿಖಾಧಿಕಾರಿಗಳು ಇದೀಗ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ರಿಯಾ 10ನೇ ಆರೋಪಿಯಾಗಿದ್ದಾರೆ. ಈಕೆ ಇದೇ ಪ್ರಕರಣದಲ್ಲಿ ಆರೋಪಿಯಾಗಿರುವ ಸ್ಯಾಮ್ಯುಯೆಲ್ ಮಿರಾಂಡಾ, ರಿಯಾಳ ಸಹೋದ ಶೋವಿಕ್, ದೀಪೇಶ್ ಸಾವಂತ್ ಮತ್ತು ಇತರರಿಂದ ಗಾಂಜಾ ಪಡೆದು ರಿಯಾ ಸುಶಾಂತ್ಗೆ ನೀಡುತ್ತಿದ್ದರು ಎಂದು ಚಾರ್ಜ್ಷೀಟ್ನಲ್ಲಿ ಆರೋಪಿಸಲಾಗಿದೆ.
ನಟನ ಸಾವಿಗೆ ಸಂಬಂಧಿಸಿದ ಮಾದಕವಸ್ತು ಪ್ರಕರಣದಲ್ಲಿ 35 ಆರೋಪಿಗಳ ವಿರುದ್ಧ ಮಾದಕ ದ್ರವ್ಯ ವಿರೋಧಿ ನಿಗ್ರಹ ಸಂಸ್ಥೆ ವಿಶೇಷ ಎನ್‌ಸಿಬಿ ಕೋರ್ಟ್ಗೆ ಕರಡು ಆರೋಪಪಟ್ಟಿಗಳನ್ನು ಸಲ್ಲಿಸಿದ್ದು, ಅದರಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿದೆ. ಈ ಆರೋಪಿಗಳು ಅಕ್ರಮವಾಗಿ 'ಗಾಂಜಾ', 'ಚರಸ್', ಕೊಕೇನ್ ಮತ್ತು ಇತರ ಸೈಕೋಟ್ರೋಪಿಕ್ ಪದಾರ್ಥಗಳನ್ನು ಸೇವಿಸಿದ್ದಾರೆ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ.
ರಿಯಾ ಚರ್ಕವತ್ರಿ ಗಾಂಜಾ ಪಡೆದು ಹಣ ನೀಡಿರುವ ರಸೀತಿಯನ್ನು ಕೂಡ ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ. ಚಾರ್ಜ್ಷೀಟ್ನಲ್ಲಿ ಮಾಡಿರುವ ಆರೋಪದ ಪ್ರಕಾರ, ರಿಯಾಳ ಸಹೋದರ ಶೋವಿಕ್, ಡ್ರಗ್ ಪೆಡ್ಲರ್‌ಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದರು ಮತ್ತು ಗಾಂಜಾ, ಚರಸ್ ಆರ್ಡರ್ ಮಾಡಿದ ನಂತರ ಸಹ-ಆರೋಪಿಗಳಿಂದ ಅನೇಕ ಡೆಲಿವರಿಗಳನ್ನು ಪಡೆದಿದ್ದರು ಎನ್ನುವುದು ತಿಳಿದುಬಂದಿದೆ.